ಕಾಸರಗೋಡು: ಜಿಲ್ಲಾ ಪಂಚಾಯಿತಿ ವತಿಯಿಂದ ಜರಿಯಾಟ್ರಿಕ್ ಓ.ಪಿ ವಿಭಾಗ ಮತ್ತು ವಾರ್ಡು ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಲು ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಗಿದೆ. ಎಂಡೋಸಲ್ಫಾನ್ ಪ್ಯಾಕೇಜ್ ನಿಧಿ ಬಳಸಿ ನಿರ್ಮಿಸಿರುವ ಕಟ್ಟಡವನ್ನು ಇದಕ್ಕಾಗಿ ಬಳಸಿಕೊಳ್ಳಲಾಗುವುದು. 2.50ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳ್ಳಲಿದ್ದು, 1.20ಕೋಟಿ ರೂ. ಜಿಪಂ ಹಾಗೂ ಬಾಕಿ ಮೊತ್ತ ಕೆ.ಡಿ.ಪಿ ವತಿಯಿಂದ ಮೀಸಲಿರಿಸಿ ಯೋಜನೆ ಪೂರ್ತಿಗೊಳಿಸಲು ತೀರ್ಮಾನಿಸಲಾಗಿದೆ.
ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಸಂಸದ, ಶಾಸಕರ ನಿಧಿ ಬಳಸಿ ಹೆಚ್ಚಿನ ಸವಲತ್ತು ಒದಗಿಸಲಾಗುವುದು. ಜಿಲ್ಲೆಯ ಶಾಲೆಗಳಿಗೆ ಪೇಂಟ್ ಹಚ್ಚಲು 40ಲಕ್ಷ ರೂ. ಮೀಸಲಿರಿಸಲಾಗಿದೆ. ಜಿಲ್ಲೆಯ ಆಯ್ದ 12 ಶಾಳೆಗಳಲ್ಲಿ ನೀರಿನ ಗುಣಮಟ್ಟ ತಿಳಿಯಲು ಲ್ಯಾಬ್ ಸ್ಥಾಪಿಸಲೂ ತೀರ್ಮಾನಿಸಲಾಯಿತು. ಜಿಲ್ಲೆಯಲ್ಲಿ 39ಸ್ಥಳೀಯಾಡಳಿತ ಸಂಸ್ಥೆಗಳ 2021-22ನೇ ಸಾಲಿನ ಯೋಜನೆಗಳಿಗೆ ಜಿಪಂ ಅಂಗೀಕಾರ ನೀಡಿತು. ಈ ಮೂಲಕ ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಷಿಕ ಯೋಜನೆಗಳನ್ನು ಪರಿಷ್ಕರಿಸಲಾಯಿತು.
ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸವಾಗತ್ ರಣವೀರ್‍ಚಂದ್, ಜಿಪಂ ಉಪಾಧ್ಯಕ್ಷ ಶಾನವಾಜ್ ಪಾದೂರ್, ಜಿಲ್ಲಾ ಸಹಾಯಕ ಯೋಜನಾಧಿಕಾರಿ ನಿನೋಜ್, ವಕೀಲ ಸಿ.ರಾಮಚಂದ್ರನ್, ಯೋಜನಾ ಸಮಿತಿ ಸದಸ್ಯರಾದ ಎಸ್.ಎನ್ ಸರಿತಾ, ಗೀತಾಕೃಷ್ಣನ್, ಶಕುಂತಳಾ, ಜಾಸ್ಮಿನ್ ಕಬೀರ್ ಮುಂತಾದವರು ಉಪಸ್ಥಿತರಿದ್ದರು.