ನವದೆಹಲಿ :ಸರಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ಉದ್ದೇಶದಿಂದ ಆರ್ಥಿಕ ದುರ್ಬಲ ವರ್ಗದವರ ಆದಾಯ ಮಿತಿಯನ್ನು ಪುನರ್ ಪರಿಶೀಲಿಸಲು ಕೇಂದ್ರ ಸರಕಾರ ಸಮಿತಿಯೊಂದನ್ನು ರೂಪಿಸಿದೆ. ಮಾಜಿ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ, ಸಾಮಾಜಿಕ ವಿಜ್ಞಾನ ಸಂಶೋಧನೆಯ ಭಾರತೀಯ ಮಂಡಳಿಯ ಸದಸ್ಯ-ಕಾರ್ಯದರ್ಶಿ ವಿ.ಕೆ. ಮಲ್ಹೋತ್ರ ಹಾಗೂ ಸರಕಾರದ ಪ್ರಾಥಮಿಕ ಆರ್ಥಿಕ ಸಲಹೆಗಾರ ಸಂಜಯ್ ಸನ್ಯಾಲ್ ಈ ಸಮಿತಿಯ ಸದಸ್ಯರು.
ಮೂರು ವಾರಗಳ ಒಳಗೆ ವರದಿ ಸಲ್ಲಿಸುವಂತೆ ಈ ಸಮಿತಿಗೆ ನಿರ್ದೇಶಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ಮುಂದೆ ನೀಡಿದ ಹೇಳಿಕೆಗೆ ಅನುಗುಣವಾಗಿ ಸರಕಾರ ಈ ಸಮಿತಿ ರಚಿಸಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ತನ್ನ ಅಧಿಕೃತ ಜ್ಞಾಪನಾಪತ್ರದಲ್ಲಿ ಹೇಳಿದೆ. ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ನಲ್ಲಿ ಅಖಿಲ ಭಾರತ ಸೀಟ್ ಕೋಟಾದಲ್ಲಿ ಇತರ ಹಿಂದುಳಿದ ವರ್ಗಕ್ಕೆ ಶೇ. 27 ಹಾಗೂ ಆರ್ಥಿಕ ದುರ್ಬಲ ವರ್ಗಕ್ಕೆ ಶೇ. 10 ಮೀಸಲಾತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿ ನವೆಂಬರ್ 25ರಂದು ವಿಚಾರಣೆ ನಡೆಸಿದ ಸಂದರ್ಭ ಕೇಂದ್ರ ಸರಕಾರ ಈ ಸಮಿತಿ ರಚಿಸುವ ಹೇಳಿಕೆ ನೀಡಿತ್ತು.
2019ರಲ್ಲಿ ಕೇಂದ್ರ ಸರಕಾರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ಬಡ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ವಿಸ್ತರಿಸಿತ್ತು. ಯಾವುದೇ ಮೀಸಲಾತಿಗೆ ಒಳಪಡದ ಸಮಾಜದ ವರ್ಗಗಳಿಗೆ ಇದು ಅನ್ವಯವಾಗುತ್ತದೆ. ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ನ ನೀಟ್ ಆಕಾಂಕ್ಷಿಗಳು, ಸಾಮಾನ್ಯ ವರ್ಗಕ್ಕೆ ಸೇರಿದವರು ಇತರ ಹಿಂದುಳಿದ ವರ್ಗ ಹಾಗೂ ಆರ್ಥಿಕ ದುರ್ಬಲ ವರ್ಗಗಳಿಗೆ ಕೋಟಾ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಈ ಮನವಿ ಸಲ್ಲಿಸಿತ್ತು.