ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಕನ್ನಡಿಗರ ಕಿಚ್ಚು ಹೆಚ್ಚಾಗಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ(MES) ಸೇರಿದಂತೆ ಹಲವರ ದುಷ್ಕೃತ್ಯ ಮತ್ತು ಪುಂಡಾಟಿಕೆ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ.
ಕನ್ನಡ ಬಾವುಟ ಸುಟ್ಟುಹಾಕಿದ್ದಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಕಪ್ಪು ಮಸಿ ಬಳಿದದ್ದು ಆಯಿತು. ಅಲ್ಲಿಂದ ಮುಯ್ಯಿಗೆ ಮುಯ್ಯಿ ಎಂಬಂತೆ ಕನ್ನಡಿಗರು ಮತ್ತು ಮಹಾರಾಷ್ಟ್ರಿಗರ ಹೋರಾಟ, ಸಿಟ್ಟು, ದ್ವೇಷ ಕುಂದಾನಗರಿ ಬೆಳಗಾವಿಯಲ್ಲಿ ಹೆಚ್ಚಾಗಿದೆ.
ವಿವಿಧ ಕನ್ನಡಪರ ಸಂಘಟನೆಗಳಿಂದ ಇಂದು ಪ್ರತಿಭಟನೆ:
ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲು, ಕನ್ನಡಿಗರನ್ನು, ಕನ್ನಡ ಭಾಷೆಯನ್ನು ಕೆಣಕುವವರ ವಿರುದ್ಧ ಹೋರಾಡಲು ವಿವಿಧ ಕನ್ನಡಪರ ಸಂಘಟನೆಗಳು ಬೆಳಗಾವಿ ಚಲೋ ನಡೆಸಲು ಮುಂದಾಗಿವೆ. ಇಂದು ಬೆಳಗಾವಿಯಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕನ್ನಡ ಸಂಘದ ನಾರಾಯಣ ಗೌಡ ಬಣ ಮತ್ತು ಪ್ರವೀಣ್ ಶೆಟ್ಟಿ ಬಣಗಳು ನಿರ್ಧರಿಸಿವೆ. ಇದಕ್ಕೆ ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದು ಸರ್ಕಾರದ ಜನ ಪ್ರತಿನಿಧಿಗಳು ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ಹೊತ್ತಿನಲ್ಲಿಯೇ ಎಂಇಎಸ್ ತನ್ನ ಪುಂಡಾಟಿಕೆಯನ್ನು ಮೆರೆಯುತ್ತಿವೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಎಂಇಎಸ್ ಗೆ ಸ್ಪಷ್ಟ ಕಠಿಣ ಸಂದೇಶ ನೀಡಬೇಕೆಂದು ಸಂಘಟನೆಗಳು ಒತ್ತಾಯಿಸುತ್ತಿವೆ.
ಎಂಇಎಸ್ ನಿಷೇಧಕ್ಕೆ ಒತ್ತಾಯ:
ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಂಘಟನೆಯನ್ನು ನಿಷೇಧಿಸಬೇಕು, ಕನ್ನಡ ಬಾವುಟವನ್ನು ಸುಟ್ಟುಹಾಕುವ, ಕನ್ನಡ ಭಾಷೆಗೆ ಧಕ್ಕೆಯನ್ನುಂಟುಮಾಡುವ ಸಂಘಟನೆಯನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಕ್ರಿಯವಾಗಿರಲು ಬಿಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಒತ್ತಾಯಿಸಿದ್ದಾರೆ. ಕಾಲ್ನಡಿಗೆ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಚನ್ನಮ್ಮ ವೃತ್ತಕ್ಕೆ ರ್ಯಾಲಿ ಮೂಲಕ ಸಾಗಲು ನಿರ್ಧರಿಸಿದ್ದಾರೆ.
ಬೆಳಗಾವಿಯಲ್ಲಿ ತೀವ್ರ ಕಟ್ಟೆಚ್ಚರಕ್ಕೆ ಸಿಎಂ ಸೂಚನೆ:
ಬೆಳಗಾವಿ ನಗರ ಕನ್ನಡಿಗರು ಮತ್ತು ಮಹಾರಾಷ್ಟ್ರ ನಡುವೆ ಸಿಟ್ಟು, ದ್ವೇಷ, ಆಕ್ರೋಶಕ್ಕೆ ಕಾರಣವಾಗಿರುವುದರಿಂದ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪರಿಸ್ಥಿತಿ ಬಹಳ ಸೂಕ್ಷ್ಮವಾಗಿದೆ. ತೀವ್ರ ಕಟ್ಟೆಚ್ಚರ ವಹಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಗೃಹ ಇಲಾಖೆಗೆ ಸೂಚಿಸಿದ್ದಾರೆ. ಬೆಳಗಾವಿಯಾದ್ಯಂತ 2 ಸಾವಿರದ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಡಿಸೆಂಬರ್ 22ರ ಬೆಳಗ್ಗೆ 6 ಗಂಟೆಯವರಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ.
ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಅವರ ಪ್ರತಿಮೆಗಳನ್ನು ದುಷ್ಕರ್ಮಿಗಳು ಗುರಿಯಾಗಿಸಿದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಪ್ರತಿಮ ವ್ಯಕ್ತಿಗಳನ್ನು ಗೌರವಿಸಬೇಕು, ವದಂತಿಗಳಿಗೆ ಕಿವಿಗೊಡುವುದನ್ನು ತಪ್ಪಿಸಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ.
ಶಿವಾಜಿಯ ಪ್ರತಿಮೆಯನ್ನು ಅಪವಿತ್ರಗೊಳಿಸಲಾಗಿದೆ ಎಂಬ ಸುದ್ದಿಯ ನಂತರ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಬ್ರಿಟಿಷರ ವಿರುದ್ಧ ಹೋರಾಡಿದ 19 ನೇ ಶತಮಾನದ ದೇಶಭಕ್ತ ರಾಯಣ್ಣನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದೇ ಬೆಳಗಾವಿಯಲ್ಲಿ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ.
ದೇಶಭಕ್ತರನ್ನು ಗೌರವಿಸುವಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ, ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ, ಗೌರವಾರ್ಥವಾಗಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ, ನಾವು ಅವರನ್ನು ಗೌರವಿಸಿ ಘನತೆಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಛತ್ರಪತಿ ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮ ಅಥವಾ ವೀರ ಸಂಗೋಳಿ ರಾಯಣ್ಣ ಅವರೆಲ್ಲರೂ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ವಸಾಹತುಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ್ದಾರೆ. ಭಾಷಾ ರಾಜಕಾರಣದ ಹೆಸರಿನಲ್ಲಿ ನಮ್ಮ ಯಾವುದೇ ಮಹಾನ್ ರಾಷ್ಟ್ರೀಯ ನಾಯಕರನ್ನು ಅವಮಾನಿಸುವುದು ಅವರ ರಾಷ್ಟ್ರೀಯತೆಯ ಮನೋಭಾವಕ್ಕೆ ಅಪಮಾನವಾಗಿದೆ ಮತ್ತು ಅದನ್ನು ಸಹಿಸಲಾಗುವುದಿಲ್ಲ, ಯಾವುದೇ ಸಂದರ್ಭದಲ್ಲೂ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು ಕಿಡಿಗೇಡಿಗಳಿಗೆ ನಾವು ಬಿಡುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.