ನವದೆಹಲಿ: ಪ್ರತಿಪಕ್ಷ ನಾಯಕತ್ವ ವಿಚಾರ ಕುರಿತು ಕಾಂಗ್ರೆಸ್ ಪಕ್ಷದ ವಿರುದ್ಧ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ಕಳೆದ ದಶಕದಲ್ಲಿ ಸ್ಪರ್ಧಿಸಿದ್ದ ಬಹುತೇಕ ಚುನಾವಣೆಗಳಲ್ಲಿ ಪಕ್ಷ ಸೋತಿರುವಾಗ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕಾಂಗ್ರೆಸ್ ದೈವಿಕ ಹಕ್ಕು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ. ಪ್ರಜಾಸತಾತ್ಮಕವಾಗಿ ಪ್ರತಿಪಕ್ಷ ನಾಯಕ ಸ್ಥಾನ ನಿರ್ಧಾರವಾಗಬೇಕು ಎಂದಿದ್ದಾರೆ.
ಪ್ರಬಲ ಪ್ರತಿಪಕ್ಷಕ್ಕಾಗಿ ಕಾಂಗ್ರೆಸ್ ಹೆಚ್ಚೆಚ್ಚು ಬಿಂಬಿಸಿಕೊಳ್ಳುತ್ತಿದೆ. ಆದರೆ, ಕಳೆದ 10 ವರ್ಷಗಳಲ್ಲಿ ಶೇ.90 ಕ್ಕಿಂತಲೂ ಹೆಚ್ಚು ಚುನಾವಣೆಗಳಲ್ಲಿ ಪಕ್ಷ ಸೋತಿರುವಾಗ ಕಾಂಗ್ರೆಸ್ ನಾಯಕತ್ವ ದೈವಿಕ ಹಕ್ಕಲ್ಲ, ಪ್ರತಿಪಕ್ಷ ನಾಯಕ ಸ್ಥಾನ ಪ್ರಜಾಸತಾತ್ಮಕವಾಗಿ ನಿರ್ಧಾರವಾಗಬೇಕಿದೆ ಎಂದು ಕಿಶೋರ್ ಟ್ವೀಟ್ ಮಾಡಿದ್ದಾರೆ.
ಯುಪಿಎ ಉಳಿದಿಲ್ಲ ಎಂದು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಹೇಳಿದ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ಈ ರೀತಿಯ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿನ ವಿಧಾನಸಭಾ ಚುನಾವಣೆಯಿಂದಲೂ ಪ್ರಶಾಂತ್ ಕಿಶೋರ್ ಹಾಗೂ ಅವರ ಐ- ಪ್ಯಾಕ್ ತಂಡ ಟಿಎಂಸಿ ಪರವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ಆ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.