ಗೋರಖ್‌ಪುರ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಗೋರಖ್‌ಪುರದಲ್ಲಿ ಏಮ್ಸ್ ಮತ್ತು ಪ್ರಮುಖ ರಸಗೊಬ್ಬರ ಘಟಕ ಸೇರಿದಂತೆ ಮೂರು ಬೃಹತ್ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟಿಸಿದರು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ(ICMR) ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಸೇರಿದಂತೆ 9,600 ಕೋಟಿ ರೂ. ಮೊತ್ತದ ಮೂರು ಬೃಹತ್ ಯೋಜನೆಗಳನ್ನು ಪ್ರಧಾನಿ ಮೋದಿ ಇಂದು ಲೋಕಾರ್ಪಣೆ ಮಾಡಿದರು.
ಹೊಸದಾಗಿ ನಿರ್ಮಿಸಲಾದ ರಸಗೊಬ್ಬರ ಘಟಕವನ್ನು ಹಿಂದೂಸ್ತಾನ್ ಉರ್ವರಕ್ ರಸಾಯನ್ ಲಿಮಿಟೆಡ್(HURL) ನಿರ್ವಹಿಸುತ್ತದೆ.
1,011 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಗೋರಖ್‌ಪುರ ಏಮ್ಸ್ ಪೂರ್ವ ಉತ್ತರ ಪ್ರದೇಶದ ಜನರಿಗೆ ಮಾತ್ರವಲ್ಲದೆ ಬಿಹಾರ, ಜಾರ್ಖಂಡ್ ಮತ್ತು ನೇಪಾಳದ ಬೃಹತ್ ಜನಸಂಖ್ಯೆಗೆ ವಿಶ್ವ ದರ್ಜೆಯ ಆರೋಗ್ಯ ಸೌಲಭ್ಯಗಳನ್ನು ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ, 36 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರವು ಸಾಂಕ್ರಾಮಿಕ ರೋಗಗಳ ಪರೀಕ್ಷೆ ಮತ್ತು ಸಂಶೋಧನೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.