ಬೀಜಿಂಗ್: ಖ್ಯಾತ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆ ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್ ಗೆ ಚೀನಾ ಛೀಮಾರಿ ಹಾಕಿದೆ. ಎಲಾನ್ ಮಸ್ಕ್ ಸ್ಥಾಪಿತ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್, ತನ್ನ ನೂತನ ಸ್ಟಾರ್ ಲಿಂಕ್ ಇಂಟರ್ನೆಟ್ ಸೇವಾ ಸಂಬಂಧಿ ಉಪಗ್ರಹವನ್ನು ಇತ್ತೀಚಿಗಷ್ಟೆ ಲಾಂಚ್ ಮಾಡಿತ್ತು.
ಸ್ಪೇಸ್ ಎಕ್ಸ್ ಸಂಸ್ಥೆ ಉಡಾಯಿಸಿದ ಉಪಗ್ರಹ ಚೀನಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಮೀಪದಲ್ಲಿಯೇ ಹಾದುಹೋಗಿದ್ದು ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ. ಸ್ವಲ್ಪದರಲ್ಲೇ ಅಪಘಾತ ತಪ್ಪಿದೆ ಎಂದು ಚೀನಾ ದೂರಿದೆ.
ಘಟನೆಗೆ ಸಂಬಂಧಿಸಿದಂತೆ ಚೀನಾ ವಿಶ್ವಸಂಸ್ಥೆಗೆ ದೂರನ್ನೂ ಸಲ್ಲಿಸಿದೆ. ಚೀನಾ ದೂರಿಗೆ ಅಮೆರಿಕ ಮತ್ತು ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದು, ಚೀನಾ ವಿರುದ್ಧ ಕಿಡಿಕಾರಿದ್ದಾರೆ.
ಬಾಹ್ಯಾಕಾಶ ಭಯೋತ್ಪಾದನೆಯಲ್ಲಿ ಅಮೆರಿಕ ನಿರತವಾಗಿದೆ ಎಂದು ಚೀನಾ ಮಂದಿ ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕ ವಿರುದ್ಧ ಹರಿಹಾಯ್ದಿದ್ದಾರೆ.