ಮಂಜೇಶ್ವರ:ಕಾಸರಗೋಡಿನ ಪ್ರತಿಯೊಂದು ಮನೆ, ತರವಾಡು, ದೇವಸ್ಥಾನ, ದೈವಸ್ಥಾನಗಳ ತಳಹದಿಯಲ್ಲೋ, ಕರುಮಾಡದಲ್ಲೋ, ತಾಡೆಯೋಲೆಗಳಲ್ಲೋ ಹಲವರ ಯಶೋಗಾಥೆಗಳು ಹುದುಗಿವೆ. 'ಅನುಭವ'ವನ್ನು 'ಅನುಭಾವ'ವಾಗಿಸಿದ ನೂರಾರು ವಕ್ತಿಗಳ ಯಶೋಗಾಥೆ ಸಮಾಜದ ಮುಂದೆ ಅನಾವರಣಗೊಳ್ಳಬೇಕು. ಇವೆಲ್ಲವೂ ನಾಳೆಗೆ ಉಳಿಯದು, ಆದರೆ ಉಳಿಸಬೇಕಾದ ತುರ್ತು ಅನಿವಾರ್ಯತೆ ನಮ್ಮ ಮುಂದಿದೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕ ಡಾ.ರತ್ನಾಕರ ಮಲ್ಲಮೂಲೆ ಹೇಳಿದರು.
ಪಾವೂರು ಕಾಪುಬಾಳಿಕೆ ಶ್ರೀ ದುರ್ಗಾದೇವಿ ಪ್ರತಿಷ್ಠಾ ಶತಾಬ್ದಿ ಸಂಭ್ರಮ ಸಭಾ ಕಾರ್ಯಕ್ರಮದಲ್ಲಿ, ಕಠಿಣ ಸಾಧನೆಯ ಮೂಲಕ ವೈದ್ಯ ವಿದ್ಯೆ ಮತ್ತು ಮಂತ್ರವಾದ ವಿದ್ಯೆ ಸಿದ್ಧಿಸಿಕೊಂಡು ಊರ ಪರವೂರ ಸಾವಿರಾರು ಜನರ ನಿಸ್ವಾರ್ಥ ಸೇವೆಗೈದ ಹಿರಿಯ ಪಂಡಿತ ಕೊರಗ ಅಡ್ಯಂತಾಯರ ಸಂಪೂರ್ಣ ವ್ಯಕ್ತಿ ಚಿತ್ರಣ ಮತ್ತು ಆ ಕಾಲಘಟ್ಟದ ಸಾಮಾಜಿಕ ಬದುಕಿನ ಸೂಕ್ಷ್ಮ ಒಳ ನೋಟದ ಹೂರಣದೊಂದಿಗೆ ಸಿದ್ಧಗೊಂಡ 'ಸ್ವರ್ಣಕದಿರು' ಸ್ಮರಣ ಸಂಚಿಕೆ ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು.
ಕಾಸರಗೋಡಿನ ಸಾಂಸ್ಕøತಿಕ ಚಾರಿತ್ರಿಕ ಸೂಕ್ಷ್ಮತೆಗಳನ್ನು ವ್ಯವಸ್ಥಿತವಾಗಿ ದಾಖಲಿಸುವ ಕಾರ್ಯ ಇನ್ನೂ ನಡೆದಿಲ್ಲ. ವಿದ್ಯಾರ್ಥಿಗಳು, ಅದ್ಯಾಪಕರು, ಸಾಹಿತಿಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸುವ ಮನಸ್ಸು ಮೂಡಬೇಕು. ನಾಳೆಗೆ ಇಲ್ಲದಾಗುವ ಇಲ್ಲಿನ ನೆಲಮೂಲ ಸಂಸ್ಕೃತಿಯ ವಿಷಯ ವಿಚಾರಗಳನ್ನು ಕಾಪಿಡುವ ಮತ್ತು ದಾಖಲಿಸುವ ಪ್ರಯತ್ನ ನಡೆಯಬೇಕು. ಚಾರಿತ್ರಿಕ ಮಹತ್ವವನ್ನು ಹೊಂದಿದ ಕಾಪುಬಾಳಿಕೆ ಮನೆತನದ 'ಸ್ವರ್ಣ ಕದಿರು' ಸ್ಮರಣ ಸಂಚಿಕೆ ಕೃತಿ ಲೋಕಾರ್ಪಣೆಗೆ ಕಾರಣರಾದ ಕುಟುಂಬ ಸದಸ್ಯರು ಮತ್ತು ಸಂಪಾದಕರ ಪ್ರಯತ್ನ ಅನುಸರಣೀಯ ಎಂದರು.
ವರ್ಕಾಡಿ ಪಂಚಾಯಿತಿ ಮಾಜಿ ಅಧ್ಯಕ್ಷ, ನಿವೃತ್ತ ಮುಖ್ಯ ಶಿಕ್ಷಕ ದೇವಪ್ಪ ವಿ.ಶೆಟ್ಟಿ ಚಾವಡಿಬೈಲು ಅಧ್ಯಕ್ಷತೆ ವಹಿಸಿದರು. ಸ್ಮರಣ ಸಂಚಿಕೆ ಸಂಪಾದಕಿ, ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ಕೃತಿ ಪರಿಚಯಿಸಿದರು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಶಿಕ್ಷಕಿ, ಕಾಪು ಬಾಳಿಕೆ ಕುಟುಂಬದ ವಾಣಿ ಜಿ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನದ ಖ್ಯಾತ ಸ್ತ್ರೀ ವೇಷಧಾರಿ ವರ್ಕಾಡಿ ರವಿ ಅಲೆವೂರಾಯ, ಹಿರಿಯರಾದ ರಘು ಶೆಟ್ಟಿ ಕುಂಜತ್ತೂರು ಶುಭ ಹಾರೈಸಿದರು.ಯಕ್ಷಗಾನ ಕಲಾವಿದ, ಸಂಘಟಕ ಗಣೇಶ ಶೆಟ್ಟಿ ಮುಂಬೈ ಕಾಪುಬಾಳಿಕೆ ಶ್ರೀ ದುರ್ಗೆಯ ಕೃಪೆಗೆ ಪಾತ್ರರಾದ ಬಗ್ಗೆ ಅನುಭವ ತಿಳಿಸಿದರು. ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಅರಿಬೈಲು ಗೋಪಾಲ ಶೆಟ್ಟಿ, ಕಾಪು ಬಾಳಿಕೆ ಮನೆತನದ ಹಿರಿಯರಾದ ಲೀಲಾವತಿ, ಉಮಾವತಿ ಕುಟುಂಬಸ್ಥರು ಗಣ್ಯರು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಕಾಪು ಬಾಳಿಕೆ ಕುಟುಂಬಸ್ಥರು ಸಂಪಾದಕಿ ರಾಜಶ್ರೀ ಟಿ.ರೈ ಅವರನ್ನು ಗೌರವಿಸಿದರು.ಶ್ರೀ ದೇವಿಯ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡವರನ್ನು ಗೌರವಿಸಲಾಯಿತು.
ಚಂದ್ರಾವತಿ ಆರ್.ರೈ ಸ್ವಾಗತಿಸಿ, ಜಯಪ್ರಕಾಶ ಅಡ್ಯಂತಾಯ ವಂದಿಸಿದರು. ಅವಿನಾಶ್ ಶೆಟ್ಟಿ ಕೋಡಿಕಲ್ ನಿರೂಪಿಸಿದರು. ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ, ಪ್ರಾರ್ಥನೆ, ಗಣಪತಿ ಹೋಮ, ದುರ್ಗಾ ಹೋಮ, ಕಲಶಾಭಿಷೇಕ, ಖ್ಯಾತ ದಾಸ ಸಂಕೀರ್ತನಾ ಗುರು ರಾಮಕೃಷ್ಣ ಕಾಟುಕುಕ್ಕೆ ಮತ್ತು ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ಭಜನಾ ಸೇವೆ ನಡೆಸಿಕೊಟ್ಟರು. ಸಂಜೆ ಭಜನೆ, ಶ್ರೀದೇವಿಗೆ ದುರ್ಗಾ ನಮಸ್ಕಾರ ಪೂಜೆ, ಪ್ರಸಾದ ವಿತರಣೆ ನಡೆಯಿತು.