ನವದೆಹಲಿ: ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 14 ಮಂದಿಯನ್ನು ಹೊತ್ತೊಯ್ದಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಕುನ್ನೂರಿನಲ್ಲಿ ಪತನವಾಗುವ ಮೊದಲು ಕ್ಷಣಗಳ 19 ಸೆಕೆಂಡುಗಳ ವಿಡಿಯೋ ಲಭ್ಯವಾಗಿದೆ.
ಆ ವಿಡಿಯೋದಲ್ಲಿ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ನಾಲ್ಕು ಜನರ ಗುಂಪು ಹೆಲಿಕಾಪ್ಟರ್ ಹಾರುವ ಶಬ್ದ ಕೇಳಿ ಓಡಿ ಬಂದು ಆಕಾಶದತ್ತ ನೋಡುತ್ತಾರೆ. ಆದರೆ ಅವರು ಬರುವಷ್ಟರಲ್ಲಿ ಹೆಲಿಕಾಪ್ಟರ್ ದಟ್ಟವಾದ ಮೋಡದೊಳಗೆ ಕಣ್ಮರೆಯಾಗುತ್ತದೆ. ಆದರೆ ನಂತರ ಹೆಲಿಕಾಪ್ಟರ್ ಹಾರಾಟದ ಶಬ್ದವೇ ಕೇಳಿ ಬರುವುದಿಲ್ಲ. ಆಗ ಅಲ್ಲಿದ್ದ ಜನರು ರೋಟಾರ್‍ಗಳು ನಿಂತು ಹೋಯಿತೇ? ಏನಾಯಿತು? ಪತನವಾಯಿತೇ? ಎಂದು ಮಾತನಾಡಿಕೊಳ್ಳುವುದನ್ನು ಕಾಣಬಹುದು.
ಜನರಲ್ ರಾವತ್, ಅವರು ಉಪನ್ಯಾಸ ನೀಡಲು ವೆಲ್ಲಿಂಗ್ಟನ್‍ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ತೆರಳುತ್ತಿದ್ದರು. ಅವರ ಪತ್ನಿ, ಸಿಡಿಎಸ್ ಸಿಬ್ಬಂದಿ ಜತೆಗಿದ್ದರು. ಹೆಲಿಪ್ಯಾಡ್‍ನಿಂದ ಲ್ಯಾಂಡ್ ಆಗಬೇಕಿದ್ದ ಸುಮಾರು 10 ಕಿ.ಮೀ ದೂರದಲ್ಲಿ ಅಪಘಾತ ಸಂಭವಿಸಿದೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಹೆಲಿಕಾಪ್ಟರ್‍ನಲ್ಲಿದ್ದ 14 ಜನರ ಪೈಕಿ 13 ಮಂದಿ ಸಾವನ್ನಪ್ಪಿದ ಕುನೂರ್ ಬಳಿ ಐಎಎಫ್ ಹೆಲಿಕಾಪ್ಟರ್ ದುರಂತದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ವಿವರಿಸಲಿದ್ದಾರೆ.
ಈ ವರ್ಷದ ಸ್ವಾತಂತ್ರ್ಯ ದಿನದಂದು ಶೌರ್ಯ ಚಕ್ರ ಪಡೆದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದು, ಪ್ರಸ್ತುತ ವೆಲ್ಲಿಂಗ್ಟನ್‍ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.