ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಗುರುವಾರ ಆಯೋಜಿಸಿದ್ದ ರಾಷ್ಟ್ರ ಮಟ್ಟದ CTET (Teacher Eligibility test- 2021 ) ಶಿಕ್ಷಕರ ಅರ್ಹತಾ ಪರೀಕ್ಷೆ ತಾಂತ್ರಿಕ ದೋಷದಿಂದ ರದ್ದಾಗಿದೆ. ಈ ಪರೀಕ್ಷೆಗಾಗಿ ಅಭ್ಯರ್ಥಿಗಳು ಹಗಳಿರುಳು ಓದಿ ತಯಾರಿ ನಡೆಸಿದ್ದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ಪರೀಕ್ಷೆ ಅರಂಭವಾಗಬೇಕು ಎಂಬ ಕ್ಷಣದಲ್ಲಿ ಸೆಂಟ್ರಲ್ ಟೀಚರ್ಸ್ ಎಜಿಲೆಬಲಿಟಿ ಟೆಸ್ಟ್ ಪರೀಕ್ಷೆ ರದ್ದಾಗಿದ್ದು, ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ವೇಳಾ ಪಟ್ಟಿ ಪ್ರಕಾರ ಗುರುವಾರ ಬೆಳಗ್ಗೆಯಿಂದ ಸಿಟಿಇಟಿ ಪರೀಕ್ಷೆ ನಡೆಯಬೇಕಿತ್ತು. ಅಭ್ಯರ್ಥಿಗಳು ಕಾಲಮಿತಿಯೊಳಗೆ ಪರೀಕ್ಷಾ ಕೇಂದ್ರಗಳಿಗೆ ತತೆರಳಿದ್ದರು. ಇನ್ನೇನು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗಿ ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆಯಬೇಕು ಎನ್ನುವಷ್ಟರಲ್ಲಿ ಆನ್‌ಲೈನ್ ಪರೀಕ್ಷೆ ವ್ಯವಸ್ಥೆಯಲ್ಲಿ ಲೋಪ ಕಂಡು ಬಂದಿದೆ.
ಮಧ್ಯಾಹ್ನ 2. 30 ರಿಂದ ಸಂಜೆ ಐದು ಗಂಟೆ ವರೆಗೆ ಪರೀಕ್ಷೆ ಮುಗಿಯಬೇಕಿತ್ತು. ಆದರೆ ಮಧ್ಯಾಹ್ನ ಗಂಟೆಯಾದರೂ ಪರೀಕ್ಷಾ ಕೇಂದ್ರದ ಅಂತರ್ಜಾಲದಲ್ಲಿ ಲೋಪ ಕಾಣಿಸಿಕೊಂಡು ಬಾಗಿಲೇ ತೆಗೆದಿಲ್ಲ. ಇದರಿಂದ ವಿದ್ಯಾರ್ಥಿಗಳು ರೊಚ್ಚಿಗೆದ್ದು ಪರೀಕ್ಷಾ ಕೇಂದ್ರಗಳ ಮುಂದೆ ಕೂಗಾಟ ಆರಂಭಿಸಿದ್ದಾರೆ. ಅಷ್ಟರಲ್ಲಿ ದೇಶ ವ್ಯಾಪ್ತಿ ಸಿಟಿಇಟಿ ಪರೀಕ್ಷೆ - 2021 ನ್ನು ರದ್ದು ಮಾಡಿದ್ದಾಗಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಎಸ್ಇ ಬೋರ್ಡ್‌ನಿಂದ ಪರೀಕ್ಷೆ ರದ್ದು ಸಂಗತಿ ಹೊರ ಬೀಳುತ್ತಿದ್ದಂತೆ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದಾರೆ. ಮತ್ತೆ ಯಾವಾಗ ಪರೀಕ್ಷೆ ಮಾಡುತ್ತೀರಿ? ಯಾವ ದಿನಾಂಕ ನಿಗದಿ ಮಾಡುತ್ತೀರಿ? ಮತ್ತೆ ಇದೇ ರೀತಿ ಆದರೆ ಯಾರು ಹೊಣೆ ಎಂದು ಪರೀಕ್ಷಾ ಕೇಂದ್ರಗಳ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಟಿಇಟಿ ಪರೀಕ್ಷೆ ಬೆಳಗ್ಗೆ ಮತ್ತು ಮಧ್ಯಾಹ್ನ ನಿಗದಿ ಮಾಡಲಾಗಿತ್ತು. ಬೆಳಗ್ಗೆ 9.30 ರಿಂದ ಪ್ರಶ್ನೆ ಪತ್ರಿಕೆ - 1 ರ ಪರೀಕ್ಷೆ, ಮಧ್ಯಾಹ್ನ 2.30 ರಿಂದ ಪ್ರಶ್ನೆ ಪತ್ರಿಕೆ - 2 ರ ಪರೀಕ್ಷೆ ಐದು ಗಂಟೆ ವರೆಗೂ ನಿಗದಿ ಮಾಡಲಾಗಿತ್ತು. ಬೆಳಗ್ಗೆ ನಡೆದ ಮೊದಲ ಪ್ರಶ್ನೆ ಪತ್ರಿಕೆ ಪರೀಕ್ಷೆ ಒಂದು ತಾಸು ತಡವಾಗಿದ್ದು, ಸರಾಗವಾಗಿ ಮುಗಿದಿದೆ. ಮಧ್ಯಾಹ್ನ ಆರಂಭವಾಗಬೇಕಿದ್ದ ಎರಡನೇ ಪ್ರಶ್ನೆ ಪತ್ರಿಕೆ ಪರೀಕ್ಷೆ ನಡೆದೇ ಇಲ್ಲ. ಸಂಜೆ ನಾಲ್ಕು ಗಂಟೆಯಾದರೂ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳಿಗೆ ಪ್ರವೇಶವೇ ಕಲ್ಪಿಸಲು ಆಗಿಲ್ಲ.
ಕೆಲವು ಕೇಂದ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಆಸನಗಳಲ್ಲಿ ಕೂತು ಪ್ರಶ್ನೆ ಪತ್ರಿಕೆಗಾಗಿ ಕಾದು ಕುಳಿತಿದ್ದರು. ಪರಿವೀಕ್ಷಕರು ಅಭ್ಯರ್ಥಿಗಳನ್ನು ಪರಿಶೀಲಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದರು. ಇನ್ನೇನು ಪರೀಕ್ಷೆ ಅರಂಭವಾಗಬೇಕು ಎನ್ನುವ ಸಮಯದಲ್ಲಿ ಆನ್‌ಲೈನ್ ವ್ಯವಸ್ಥೆ ಕೈ ಕೊಟ್ಟಿದೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಲೋಪವನ್ನು ಸರಿ ಪಡಿಸಲು ಅಧಿಕಾರಿಗಳು ಎಷ್ಟೇ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ಪರೀಕ್ಷೆ ರದ್ದು ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರದ್ದಾಗಿರುವ ಪರೀಕ್ಷೆ ಮಾಡುವ ಸಂಬಂಧ, ಕೇವಲ ಎರಡನೇ ಪ್ರಶ್ನೆ ಪತ್ರಿಕೆ ಪರೀಕ್ಷೆ ಮಾತ್ರ ಮಾಡಬೇಕಾ ಎಂಬುದರ ಬಗ್ಗೆ ಸ್ಪಷ್ಟ ವಿವರಗಳನ್ನು ಕೆಲವೇ ದಿನದಲ್ಲಿ ವೆಬ್ ತಾಣದಲ್ಲಿ ಪ್ರಕಟಿಸಲಾಗುವುದು. ಆನ್‌ಲೈನ್ ವ್ಯವಸ್ಥೆಯಲ್ಲಿ ಲೋಪ ಆಗಿದ್ದರಿಂದ ಪರೀಕ್ಷೆ ರದ್ದಾಗಿದೆ ಎಂದು ಸಿಬಿಎಸ್ಇ ಬೋರ್ಡ್ ಸ್ಪಷ್ಟನೆ ನೀಡಿದೆ. ಪರೀಕ್ಷೆಯನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಿದ ಬೋರ್ಡ್ ಕ್ರಮದ ಬಗ್ಗೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಟಿಇಟಿ ರದ್ದು ಕುರಿತು ಅಭ್ಯರ್ಥಿಗಳು ಸರಣಿ ಟ್ವೀಟ್ ಮಾಡಿ ಆದ ಅನುಭವದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಪ್ರಧಾನಿಗಳ ಕಾರ್ಯಾಲಯಕ್ಕೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.