ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ (Parliament Winter Session) ಆರಂಭವಾಗುತ್ತಿದ್ದಂತೆ ಕಳೆದೊಂದು ವರ್ಷದಿಂದ ರೈತರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದ ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾನೂನು (Farm Law) ಅನ್ನು ರದ್ದು ಮಾಡಿತು. ಇನ್ನು ಕೃಷಿ ಕಾನೂನು ವಿರೋಧಿಸಿ ರಾಷ್ಟ್ರ ರಾಜಧಾನಿಯ ಗಡಿ ಪ್ರದೇಶದಲ್ಲಿ ವರ್ಷವಿಡೀ ನಡೆದ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿಗೆ ತಿಳಿಸಿದೆ, ಇದು ಪ್ರತಿಪಕ್ಷಗಳು ಮತ್ತು ರೈತ ಸಂಘಗಳಿಂದ ಟೀಕೆಗೆ ಕಾರಣವಾಯಿತು. ಕೃಷಿ ಕಾನೂನು ರದ್ದುಗೊಳಿಸಿದ ಸರ್ಕಾರ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ ನೀಡಬೇಕು ಮತ್ತು ಈ ಕುರಿತು ಚರ್ಚೆ ನಡೆಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದ್ದಿದ್ದವು.
ಈ ಸಂಬಂಧ ಸದನದಲ್ಲಿ ಲಿಖಿತ ಉತ್ತರ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರತಿಭಟನೆ ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದ ರೈತರ ಯಾವುದೇ ದಾಖಲೆ ಸರ್ಕಾರದ ಬಳಿ ಇಲ್ಲ ಎಂದು ಹೇಳಿದರು. ಆದ್ದರಿಂದ ಅವರ ಕುಟುಂಬಗಳಿಗೆ ಪರಿಹಾರದ ಪ್ರಶ್ನೆಯೇ ಇಲ್ಲ ಎಂದು ಉತ್ತರಿಸಿದರು. ಈ ಸಂಬಂಧ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಈ ವಿಷಯದಲ್ಲಿ ಯಾವುದೇ ದಾಖಲೆಯನ್ನು ಹೊಂದಿಲ್ಲ. ಆದ್ದರಿಂದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ದಾಖಲೆ ಇಲ್ಲ ಎಂದ ಸರ್ಕಾರ
ಇದೇ ವೇಳೆ ವಿವಿಧ ರಾಜ್ಯಗಳಲ್ಲಿ ರೈತರ ವಿರುದ್ಧ ದಾಖಲಾಗಿರುವ ಪೊಲೀಸ್ ಪ್ರಕರಣಗಳ ಸಂಖ್ಯೆಯ ಬಗ್ಗೆ ಸರ್ಕಾರದ ಬಳಿ ದಾಖಲೆಗಳಿಲ್ಲ ಎಂದು ಮೂರನೇ ದಿನದ ಸಂಸತ್ ಅಧಿವೇಶನದಲ್ಲಿ ತಿಳಿಸಿದರು.
ಜುಲೈ-ಆಗಸ್ಟ್‌ನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲೂ ಈ ಕುರಿತು ಸದನಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ , ಅಂತಹ ಯಾವುದೇ ದಾಖಲಾತಿಯನ್ನು ಹೊಂದಿಲ್ಲ ಎಂದು ಸರ್ಕಾರ ಹೇಳಿತು.
ಪ್ರತಿಭಟನೆಯಲ್ಲಿ 700 ರೈತರ ಸಾವು
ರೈತ ಸಂಘಟನೆಗಳು ಹೇಳುವ ಪ್ರಕಾರ, ಪ್ರತಿಭಟನೆಯ ಸಮಯದಲ್ಲಿ ಸುಮಾರು 700 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿವೆ. ಅಲ್ಲದೇ, ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು ಸೇರಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾದ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಬೇಡಿಕೆ ಇಟ್ಟಿವೆ. ನವೆಂಬರ್ 19 ರಂದು, ಸಂಯುಕ್ತ ಕಿಸಾನ್ ಮೋರ್ಚಾ (SKM) ಪ್ರತಿಭಟನೆ ವೇಳೆ ಸುಮಾರು 700 ರೈತರು ಸಾವನ್ನಪ್ಪಿದರು ಎಂದು ಹೇಳಿತು.
ಕೇಂದ್ರ ಸರ್ಕಾರದ ನಡೆಗೆ ಟೀಕೆ
ಸಾವನ್ನಪ್ಪಿದ ರೈತರ ಕುರಿತು ಯಾವುದೇ ದತ್ತಾಂಶ ಇಲ್ಲ ಎಂಬ ಸರ್ಕಾರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಇದು ರೈತರಿಗೆ ಮಾಡಿದ ಅವಮಾನ. ಸರ್ಕಾರ ತನ್ನ ಬಳಿ ದಾಖಲೆಗಳಿಲ್ಲ ಎಂದು ಹೇಗೆ ಹೇಳುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನವೆಂಬರ್ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಘೋಷಿಸಿದರು. ಇದು ರೈತರು ತಮ್ಮ ಜೀವನೋಪಾಯಕ್ಕೆ ಅಪಾಯವನ್ನುಂಟುಮಾಡುತ್ತದೆ . ಈ ಮೂರು ಕೃಷಿ ಕಾನೂನು ವಿರೋಧಿಸಿ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳ ರೈತರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು.
ಪರಿಹಾರಕ್ಕೆ ಪ್ರಧಾನಿ ಪತ್ರ
ಪ್ರಧಾನಿ ಮೋದಿಯವರು ಕೃಷಿ ಕಾನೂನು ರದ್ದು ಮಾಡುವ ಘೋಷಣೆ ಮಾಡುತ್ತಿದ್ದಂತೆ ಇವು ತಮ್ಮ ವರ್ಷದ ಹೋರಾಟಕ್ಕೆ ಸಿಕ್ಕ ಮೊದಲ ಪ್ರಮುಖ ಗೆಲುವು ಎಂದು ರೈತ ಸಂಘಟನೆಗಳು ತಿಳಿಸಿದವು. ಇದೇ ವೇಳೆ ತಮ್ಮ ಉಳಿದ ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನ ಮಂತ್ರಿಗೆ ಪತ್ರ ಬರೆದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಕಾನೂನನ್ನು ತರುವುದು, ವಿದ್ಯುತ್ ವೆಚ್ಚವನ್ನು ಹೆಚ್ಚಿಸುವುದಾಗಿ ರೈತರು ಹೇಳಿದ ಉದ್ದೇಶಿತ ವಿದ್ಯುತ್ ಬಿಲ್ ಅನ್ನು ರದ್ದುಗೊಳಿಸುವುದು. ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದ ಎಲ್ಲಾ ರೈತರಿಗೆ ಪರಿಹಾರವನ್ನು ತರುವುದು ಇವುಗಳಲ್ಲಿ ಸೇರಿದ್ದವು.