ಬಳಕೆದಾರರಿಗೆ ಸದಾ ಒಂದಲ್ಲ ಒಂದು ಹೊಸ ಹೊಸ ಆಯ್ಕೆಗಳನ್ನು ನೀಡುತ್ತಿರುವ ಮೆಟಾ (Meta) ಒಡೆತನದ ವಾಟ್ಸ್ಆ್ಯಪ್ (WhatsApp) ಇಂದು ಜನಕ್ಕೆ ಮತ್ತಷ್ಟು ಹತ್ತಿರವಾಗಿದೆ. ವಿಶ್ವದಲ್ಲಿ ಕೋಟ್ಯಾಂತರ ಜನರು ಇದನ್ನು ಉಪಯೋಗಿಸುತ್ತಿದ್ದಾರೆ. ಇದೀಗ ವಾಟ್ಸ್ಆ್ಯಪ್ ಹೊಸ ಆಯ್ಕೆಯನ್ನು (WhatsApp New Feature) ನೀಡಿದೆ. ಈಗಾಗಲೆ ವಾಟ್ಸ್ಆ್ಯಪ್ನಲ್ಲಿರುವ ಡಿಸ್‌ಅಪಿಯರಿಂಗ್ ಆಯ್ಕೆ ನಿಮಗೆ ತಿಳಿದಿರಬಹುದು. ಈ ಫೀಚರ್ಸ್ನಲ್ಲಿ ವಾಟ್ಸ್ಆ್ಯಪ್ ಮಹತ್ತರವಾದ ಬದಲಾವಣೆಯನ್ನು ಮಾಡಿದೆ. ಕಣ್ಮರೆಯಾಗುವ ಸಂದೇಶಗಳಿಗೆ ಕಂಪನಿಯು 24 ಗಂಟೆಗಳು ಮತ್ತು 90 ದಿನಗಳು ಎಂಬ ಎರಡು ಹೊಸ ಅವಧಿಗಳನ್ನು ಸೇರಿಸಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಾಟ್ಸ್ಆ್ಯಪ್, ಚಾಟ್‌ಗಳಿಗೆ ಡೀಫಾಲ್ಟ್ ಆಗಿ ಕಣ್ಮರೆಯಾಗುವ ಸಂದೇಶಗಳನ್ನು ಆನ್ ಮಾಡುವ ಆಯ್ಕೆಯನ್ನು ಬಳಕೆದಾರರು ಹೊಂದಿರುತ್ತಾರೆ ಮತ್ತು ಆ ಸಂದೇಶಗಳು ಎಷ್ಟು ಸಮಯದವರೆಗೆ ಗೋಚರಿಸಬೇಕೆಂದು ಅವರು ಬಯಸುತ್ತಾರೂ ಅದನ್ನೂ ಕೂಡ ನಿಯಂತ್ರಿಸುವ ಫಿಚರ್ ಅನ್ನು ಹೊಂದಲಿದ್ದಾರೆ ಎಂದು ಸಂಸ್ಥೆ ಹೇಳಿದೆ.
ವಾಟ್ಸ್ಆ್ಯಪ್ನಲ್ಲಿ ಕಳೆದ ವರ್ಷ ಡಿಸ್‌ಅಪಿಯರಿಂಗ್ ಮೆಸೇಜ್ ಫೀಚರ್ಸ್ ಅನ್ನು ಪರಿಚಯಿಸಿತ್ತು. ಪ್ರಾರಂಭದಲ್ಲಿ ಡಿಸ್‌ಅಪಿಯರಿಂಗ್ ಮೆಸೇಜ್ ಫೀಚರ್ಸ್ ಸಕ್ರಿಯಗೊಳಿಸಿದರೆ ವಾಟ್ಸ್ಆ್ಯಪ್ನಲ್ಲಿ ಬರುವ ಹೊಸ ಸಂದೇಶಗಳು ಏಳು ದಿನಗಳ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುವ ಅವಕಾಶ ನೀಡಲಾಗಿತ್ತು. ಇದೀಗ ಬಳಕೆದಾರರು ಡಿಸ್‌ಅಪಿಯರಿಂಗ್ ಮೆಸೇಜ್ ಟೈಂ ಅನ್ನು 90 ದಿನಗಳವರೆಗೆ ಹೆಚ್ಚಿಸಲು ಅನುಮತಿಸುತ್ತದೆ. ಇದಲ್ಲದೆ, ವಾಟ್ಸ್ಆ್ಯಪ್ ಬಳಕೆದಾರರು ಎಲ್ಲಾ ಹೊಸ ಚಾಟ್‌ಗಳಿಗೆ ಡೀಫಾಲ್ಟ್ ಆಗಿ ಮೆಸೇಜ್ ಡಿಸ್‌ಅಪಿಯರಿಂಗ್ ಅನ್ನು ಆನ್ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ.
ಹಾಗೆಯೇ, ವಾಟ್ಸ್ಆ್ಯಪ್ ಗ್ರೂಪ್‌ಗಳಿಗೂ ಕೂಡ ಕಣ್ಮರೆಯಾಗುವ ಸಂದೇಶಗಳನ್ನು ಮಾಡಲು ಅನುಮತಿಸಲಾಗಿದೆ. ಈ ಅಲ್ಪಕಾಲಿಕ ಚಾಟ್‌ಗಳನ್ನು ವಾಟ್ಸ್ಆ್ಯಪ್\ ಸರ್ವರ್‌ಗಳಿಂದ ಅಳಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಇನ್ನು ಎಲ್ಲಾ ‘ಒನ್ ಟು ಒನ್’ ಚಾಟ್‌ಗಳಿಗಾಗಿ ನೀವು ಕಣ್ಮರೆಯಾಗುತ್ತಿರುವ ಮೆಸೇಜ್ ಗಳನ್ನು ಆನ್ ಮಾಡಿದಾಗ ನಿಮ್ಮ ಪ್ರಸ್ತುತ ಮೆಸೇಜ್ ಗಳು ಅಥವಾ ಚಾಟ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ.
ನಿಮ್ಮ ಎಲ್ಲಾ ಹೊಸ ಚಾಟ್‌ಗಳಿಗೆ ಕಣ್ಮರೆಯಾಗುವ ಫಿಚರ್ ಅನ್ನು ಆನ್ ಮಾಡಿದ ನಂತರ ಈ ಬಗ್ಗೆ ಆನ್ ಮಾಡಲಾಗಿದೆ ಎಂಬ ಅಧಿಸೂಚನೆಯು ಚಾಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಕಣ್ಮರೆಯಾಗುವ ಮೆಸೇಜ್ ಗಳನ್ನು ಪೂರ್ವನಿಯೋಜಿತವಾಗಿ ಆನ್ ಮಾಡಲಾಗಿದೆ ಎಂದು ಅಧಿಸೂಚನೆಯು ತಿಳಿಸುತ್ತದೆ. ಆದ್ದರಿಂದ ನೀವು ನಿರ್ದಿಷ್ಟವಾಗಿ ಆ ಫೀಚರ್ ಅನ್ನು ಬಳಸಿದ್ದೀರಿ ಎಂದು ತಿಳಿಸಲಾಗುತ್ತದೆ.
ಡೀಫಾಲ್ಟ್ ಆಗಿ ಕಣ್ಮರೆಯಾಗುವ ಸಂದೇಶಗಳ ಫಿಚರ್ ಆನ್ ಮಾಡಲು ಬಯಸುವ ಜನರಿಗೆ, WhatsApp ಇತರ ವ್ಯಕ್ತಿಯು ಆಯ್ಕೆ ಮಾಡಿದ ಡೀಫಾಲ್ಟ್ ಎಂದು ಜನರಿಗೆ ಹೇಳುವ ಸಂದೇಶವನ್ನು ಅವರ ಚಾಟ್‌ಗಳಲ್ಲಿ ಪ್ರದರ್ಶಿಸುತ್ತದೆ. ಇದು WhatsApp ನಲ್ಲಿ ಪ್ರತಿಯೊಬ್ಬರೊಂದಿಗೂ ನೀವು ಹೇಗೆ ಸಂವಹನ ನಡೆಸಬೇಕು ಎಂಬುದರ ಕುರಿತು ನೀವು ಮಾಡಿದ ಆಯ್ಕೆಯಾಗಿರಲಿದೆ.