ನವದೆಹಲಿ: ದೇಶದಲ್ಲಿ ಕೋವಿಡ್ 3ನೇ ಅಲೆ ಮತ್ತು ಓಮಿಕ್ರಾನ್ ಸೋಂಕಿನ ಏರಿಕೆ ಮಧ್ಯೆ ಬಜೆಟ್ ಅಧಿವೇಶನ ಇದೇ 31ರಂದು ಆರಂಭವಾಗುತ್ತಿದೆ. ಸಂಸತ್ತಿನ ಹಲವು ಸಿಬ್ಬಂದಿಗೆ, ಸದಸ್ಯರಿಗೆ ಈಗಾಗಲೇ ಕೊರೋನಾ ಸೋಂಕು ವಕ್ಕರಿಸಿದೆ.
ಈ ಸಂದರ್ಭದಲ್ಲಿ ಕಲಾಪ ನಡೆಸುವುದು ಅಷ್ಟು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳ ಸದಸ್ಯರು ದಿನದ 5 ಗಂಟೆಗಳ ಕಾಲ ಪ್ರತ್ಯೇಕವಾಗಿ ಕಲಾಪದಲ್ಲಿ ಭಾಗಿಯಾಗಲಿದ್ದಾರೆ.
ಜನವರಿ 31ರಂದು ಉಭಯ ಸದನಗಳ ಕಲಾಪವನ್ನುದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಿದ ನಂತರ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ದಿನ ಲೋಕಸಭೆ ಸದಸ್ಯರು ಬೆಳಗ್ಗೆ 11 ಗಂಟೆಯಿಂದ ಸದನ ಕಲಾಪದಲ್ಲಿ ಭಾಗಿಯಾದರೆ ಫೆಬ್ರವರಿ 2ರಿಂದ 11ರವರೆಗೆ ಸಾಯಂಕಾಲ 4ರಿಂದ ರಾತ್ರಿ 9 ಗಂಟೆಯವರೆಗೆ ಕಲಾಪದಲ್ಲಿ ಹಾಜರಿರಲಿದ್ದಾರೆ.
ಸಂಸತ್ತಿನ ಕೆಳಮನೆಯ ಅಧಿವೇಶನಗಳ ಸಮಯದಲ್ಲಿ, COVID-19 ಸಾಂಕ್ರಾಮಿಕ ನಿರ್ಬಂಧಗಳ ದೃಷ್ಟಿಯಿಂದ ಲೋಕಸಭೆ ಮತ್ತು ರಾಜ್ಯಸಭಾ ಸದನದ ಕುರ್ಚಿಗಳು ಮತ್ತು ಗ್ಯಾಲರಿಗಳನ್ನು ಸದಸ್ಯರ ಆಸನಕ್ಕಾಗಿ ಬಳಸಲಾಗುತ್ತದೆ ಎಂದು ಲೋಕಸಭೆಯ ಬುಲೆಟಿನ್ ತಿಳಿಸಿದೆ.
ರಾಜ್ಯಸಭೆಯ ಸದಸ್ಯರು ಎಷ್ಟು ಹೊತ್ತಿಗೆ ಕಲಾಪದಲ್ಲಿ ಭಾಗಿಯಾಗಲಿದ್ದಾರೆ ಎಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ, ಅವರು ಬೆಳಗ್ಗೆ 10ರಿಂದ ಅಪರಾಹ್ನ 3 ಗಂಟೆಯವರೆಗೆ ಸದನಕ್ಕೆ ಹಾಜರಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Union Budget session 2022: ಸಂಸತ್ತಿನ ಬಜೆಟ್ ಅಧಿವೇಶನ ಜ.31ರಿಂದ; ಫೆ.1ರಂದು ಕೇಂದ್ರ ಬಜೆಟ್ ಮಂಡನೆ
ರಾಜ್ಯಸಭಾ ಅಧ್ಯಕ್ಷ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಕೋವಿಡ್-19 ಸೋಂಕಿಗೆ ಒಳಗಾಗಿದ್ದು, ಹೈದರಾಬಾದ್‌ನಲ್ಲಿ ಐಸೊಲೇಷನ್ ನಲ್ಲಿ ಇರುವುದರಿಂದ ರಾಜ್ಯಸಭಾ ಸದಸ್ಯರ ಸಮಯದ ಕುರಿತು ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ.
ಸಂಸತ್ತಿನ ಬಜೆಟ್ ಅಧಿವೇಶನ: ಬಜೆಟ್ ಅಧಿವೇಶನ ಜನವರಿ 31 ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ. ಅಧಿವೇಶನದ ಎರಡನೇ ಭಾಗ ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ. ಅಧಿವೇಶನದ ಎರಡನೇ ಭಾಗಕ್ಕೆ ಇನ್ನೂ ಸಮಯ ನಿಗದಿಯಾಗಿಲ್ಲ. ಸರ್ಕಾರದ ಆರ್ಥಿಕ ಸಮೀಕ್ಷೆ ಜ.31ರಂದು ಅಪರಾಹ್ನ ಮಂಡನೆಯಾಗಲಿದೆ.
2020ರಲ್ಲಿ ಮಾನ್ಸೂನ್ ಅಧಿವೇಶನವು ಕೋವಿಡ್ ಮಾರ್ಗಸೂಚಿಗಳ ಅಡಿಯಲ್ಲಿ ನಡೆದ ಮೊದಲ ಪೂರ್ಣ ಅಧಿವೇಶನವಾಗಿದ್ದು, ದಿನದ ಮೊದಲಾರ್ಧದಲ್ಲಿ ರಾಜ್ಯಸಭೆಯ ಸಭೆ ಮತ್ತು ದ್ವಿತೀಯಾರ್ಧದಲ್ಲಿ ಲೋಕಸಭೆ ಅಧಿವೇಶನ ನಡೆದಿದ್ದವು. 2021ರ ಬಜೆಟ್ ಅಧಿವೇಶನದ ಮೊದಲ ಭಾಗಕ್ಕೂ ಇದೇ ಪ್ರಕ್ರಿಯೆಯನ್ನು ಅನುಸರಿಸಲಾಯಿತು. ಕಳೆದ ವರ್ಷ ಬಜೆಟ್ ಅಧಿವೇಶನ, ಮುಂಗಾರು ಮತ್ತು ಚಳಿಗಾಲದ ಅಧಿವೇಶನಗಳ ಎರಡನೇ ಭಾಗದ ಸಮಯದಲ್ಲಿ ರಾಜ್ಯಸಭೆ ಮತ್ತು ಲೋಕಸಭೆ ಸಾಮಾನ್ಯ ಸಮಯಕ್ಕೆ ಮರಳಲಾಗಿತ್ತು. ಸದಸ್ಯರು ಸಾಮಾಜಿಕ ಅಂತರದೊಂದಿಗೆ ಕುಳಿತಿದ್ದರು.