ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಐಸಿಎಆರ್-ಸಿಪಿಸಿಅರ್‍ಐ)ದ 106ನೇ ಸ್ಥಾಪನಾ ದಿನಾಚರಣೆ ಬುಧವಾರ ಕಾಸರಗೋಡು ಕೇಂದ್ರದಲ್ಲಿ ಜರುಗಿತು. ಕೇಂದ್ರ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಡಾ. ಎ.ಕೆ ಸಿಂಗ್ ಅನ್‍ಲೈನ್ ಮೂಲಕ ಸಮಾರಂಭ ಉದ್ಘಾಟಿಸಿದರು.ಸಹಾಯಕ ನಿರ್ದೇಶಕ ಡಾ. ಬಿ.ಕೆ ಪಾಂಡೆ. ಐಸಿಎಆರ್-ಸಿಪಿಸಿಅರ್‍ಐ ನಿವೃತ್ತ ನಿರ್ದೇಶಕರು, ಸಿಪಿಸಿಆರ್‍ಐ ನಿವೃತ್ತ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ಕೃಷಿಗೆ ಸಂಬಂಧಿಸಿದ ವಿವಿಧ ಪುಸ್ತಕಗಳು, ತೆಂಗು, ಅಡಕೆ ಕೃಷಿವಿಧಾನ, ಇವುಗಳಿಗೆ ತಗಲುವ ರೋಗಗಳು ಹಾಗೂ ಪರಿಹಾರಗಳ ಕುರಿತಾದ ಪುಸ್ತಕ, ಆಡಿಯೋಗಳ ಬಿಡುಗಡೆ, ಉತ್ತಮ ಸಾಧನೆ ತೋರಿದ ವಿಜ್ಞಾನಿಗಳ ತಂಡಕ್ಕೆ ಪ್ರಶಸ್ತಿ ಪ್ರದಾನ ನಡೆಯಿತು.
ಸ್ಥಾಪನಾ ದಿನಾಚರಣೆ ಅಂಗವಾಗಿ ಸಿಪಿಸಿಆರ್‍ಐ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 'ತೆಂಗಿಗೆ ಹನಿ ನೀರಾವರಿ'ವಿಷಯಕ್ಕೆ ಸಂಬಂಧಿಸಿ ಕೃಷಿಕರಿಗಾಗಿ ತರಬೇತಿ ನಡೆಯಿತು. ಚೀಮೇನಿ ತೆರೆದ ಕಾರಾಗೃಹದಲ್ಲಿ ಸಿಪಿಸಿಆರ್‍ಐ ತಾಂತ್ರಿಕ ಸಹಕಾರದೊಂದಿಗೆ ಒಂದು ಹೆಕ್ಟರ್ ಪ್ರದೇಶದಲ್ಲಿ ನಿರ್ಮಿಸಲುದ್ದೇಶಿಸಿರುವ ತೆಂಗು ಕೃಷಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ತೆಂಗಿನ ಸಸಿಯನ್ನು ಸಿಪಿಸಿಆರ್‍ಐ ನಿರ್ದೇಶಕಿ ಡಾ. ಅನಿತಾ ಕರುಣ್ ಅವರು ಚೀಮೇನಿ ತೆರೆದ ಕಾರಾಗೃಹದ ಸೂಪರಿಂಟೆಂಡೆಂಟ್ ಟಿ.ಸುಧೀರ್ ಅವರಿಗೆ ಹಸ್ತಾಂತರಿಸಿದರು. ಮುಗು ವಾಟರ್‍ಶೆಡ್‍ನ ಕೃಷಿಕರ ಪ್ರತಿನಿಧಿ ಶಿವಪ್ರಸಾದ್ ಉಪಸ್ಥಿತರಿದ್ದರು. ಹಿರಿಯ ವಿಜ್ಞಾನಿ ಡಾ. ಸಿ.ತಂಬಾನ್ ವಂದಿಸಿದರು.