ಕತ್ರಾ: ಹೊಸ ವರ್ಷದ ಮೊದಲ ದಿನದಂದೇ ಜಮ್ಮುವಿನ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯದಲ್ಲಿ ಕಾಲ್ತುಳಿತ ಉಂಟಾಗಿದ್ದು, ದುರ್ಘಟನೆಯಲ್ಲಿ ಕನಿಷ್ಟ 12 ಮಂದಿ ಸಾವನ್ನಪ್ಪಿ, 13 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಮಾತಾ ವೈಷ್ಣೋದೇವಿ ದೇವಾಲಯದ ಬಳಿಯಿರುವ ಮಾತಾ ವೈಷ್ಣೋದೇವಿ ಭವನದಲ್ಲಿ ಈ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಯಾದ ಡಾ.ಗೋಪಾಲ್ ದತ್ ಅವರು ಮಾಹಿತಿ ನೀಡಿರುವ ಪ್ರಕಾರ, ಸಾವಿನ ನಿಖರವಾದ ಅಂಕಿಅಂಶಗಳ ಬಗ್ಗೆ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಸುಮಾರು 13 ಮಂದಿ ಗಾಯಾಳುಗಳನ್ನು ಕತ್ರಾದ ಕಮ್ಯುನಿಟಿ ಹೆಲ್ತ್ ಸೆಂಟರ್'ಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದುರಂತದಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ನಿಖರ ಅಂಕಿ ಅಂಶ ಬಹಿರಂಗವಾಗಿಲ್ಲ. ಕಾಲ್ತುಳಿತ ಹೇಗೆ ಸಂಭವಿಸಿತು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಒಂದು ಮಾಹಿತಿಯ ಪ್ರಕಾರ ವೈಷ್ಣೋದೇವಿ ಪುಣ್ಯಕ್ಷೇತ್ರದಲ್ಲಿ ಮಾತಾ ವೈಷ್ಣೋದೇವಿ ಭವನದ ಬಳಿ ಬೆಳಗಿನ ಜಾವ 2.45ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಭವನದಲ್ಲಿ ಜಮಾಯಿಸಿದ್ದ ಜನರ ನಡುವೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ತಳ್ಳಾಟ ಜೋರಾಗಿದೆ. ಮುಂದೆ ಅದು ಕಾಲ್ತುಳಿತ ಸಂಭವಿಸಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.