ನವದೆಹಲಿ: ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ ಎಸಿ) ನಡೆಯುತ್ತಿರುವ ವಿವಾದ ಪರಿಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಜನವರಿ 12 ರಂದು 14 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಾತುಕತೆಗಳನ್ನು ನಡೆಸುವ ಸಾಧ್ಯತೆಯಿದೆ.
ಭಾರತೀಯ ಸೇನೆಯ ನೂತನ 14 'ಫೈರ್ ಅಂಡ್ ಫ್ಯೂರಿ' ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆಗಿ ಅನಿಂಧ್ಯಾ ಸೇನ್‌ಗುಪ್ತಾ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಚೀನಾದೊಂದಿಗಿನ ಮಾತುಕತೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಅವರು ಮಂಗಳವಾರವಷ್ಟೇ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡರು.
ಉಭಯ ದೇಶಗಳ ನಡುವಿನ ಘರ್ಷಣೆ ಬಿಂದುವಾಗಿರುವ ಹಾಟ್ ಸ್ಪ್ರಿಂಗ್ಸ್ ಪ್ರದೇಶದ ವಿವಾದ ಪರಿಹರಿಸಲು 14 ನೇ ಸುತ್ತಿನ ಭಾರತ-ಚೀನಾ ಮಾತುಕತೆಗಳು ಜನವರಿ 12 ರಂದು ನಡೆಯುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಪೂರ್ವ ಲಡಾಖ್ ಪ್ರದೇಶದಲ್ಲಿನ ವಿವಾದಿತ ಪ್ರದೇಶ ಕುರಿತು ಇಲ್ಲಿಯವರೆಗೂ ಉಭಯ ದೇಶಗಳ ನಡುವೆ 13 ಸುತ್ತಿನ ಮಾತುಕತೆ ನಡೆಸಲಾಗಿದೆ.
ಕಳೆದ ವರ್ಷ ಚೀನಾದ ಆಕ್ರಮಣ ನಂತರ ಹೊರಹೊಮ್ಮಿದ ಹಾಟ್ ಸ್ಪ್ರಿಂಗ್ಸ್ ಘರ್ಷಣೆ ಕುರಿತ ನಿರ್ಣಯವನ್ನು ಉಭಯ ದೇಶಗಳು ಎದುರು ನೋಡುತ್ತಿವೆ. ಪ್ಯಾಂಗೊಂಗ್ ಸರೋವರ ಮತ್ತು ಗೋಗ್ರಾ ಎತ್ತರದ ದಡದಲ್ಲಿನ ಘರ್ಷಣೆ ಬಿಂದುಗಳನ್ನು ಪರಿಹರಿಸಲಾಗಿದೆ ಆದರೆ ಹಾಟ್ ಸ್ಪ್ರಿಂಗ್ಸ್ ಘರ್ಷಣೆಯನ್ನು ಪರಿಹರಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.