ಗುರ್ಗಾಂವ್: ಭದ್ರತಾ ಪಡೆ ಅಧಿಕಾರಿಯೋರ್ವರು ಭಾಗಿಯಾದ 125 ಕೋಟಿ ರೂ. ಮೊತ್ತದ ಭಾರೀ ದೊಡ್ಡ ವಂಚನೆ ಬಯಲಿಗೆಳೆಯಲಾಗಿದೆ.
ಹರಿಯಾಣದ ಗಡಿ ಭದ್ರತಾ ಪಡೆ ಅಧಿಕಾರಿಯಿಂದ 14 ಕೋಟಿ ರೂ. ನಗದು, ₹ 1 ಕೋಟಿ ಮೌಲ್ಯದ ಚಿನ್ನಾಭರಣಗಳು ಮತ್ತು ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಸೇರಿದಂತೆ 7 ಐಷಾರಾಮಿ ಕಾರುಗಳು, ಅಪಾರ ಸಂಪತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಗುರ್ಗಾಂವ್ ಜಿಲ್ಲೆಯ ಮನೇಸರ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಪ್ರಧಾನ ಕಚೇರಿಯಲ್ಲಿ (ಎನ್‌ಎಸ್‌ಜಿ) ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಪ್ರವೀಣ್ ಯಾದವ್, ಐಪಿಎಸ್ ಅಧಿಕಾರಿಯಂತೆ ನಟಿಸಿ ಜನರಿಗೆ ₹ 125 ಕೋಟಿ ವಂಚನೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಐಪಿಎಸ್ ಅಧಿಕಾರಿಯಂತೆ ನಟಿಸಿದ ಯಾದವ್ ಅವರು, ಎನ್‌ಎಸ್‌ಜಿ ಕ್ಯಾಂಪಸ್‌ನಲ್ಲಿ ನಿರ್ಮಾಣ ಗುತ್ತಿಗೆ ನೀಡುವ ನೆಪದಲ್ಲಿ ಜನರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. “ಜನರಿಂದ ವಂಚನೆ ಮಾಡಿದ ಎಲ್ಲ ಹಣವನ್ನು ಎನ್‌ಎಸ್‌ಜಿ ಹೆಸರಿನಲ್ಲಿ ನಕಲಿ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
‘ಪ್ರವೀಣ್ ಯಾದವ್ ಷೇರು ಮಾರುಕಟ್ಟೆಯಲ್ಲಿ 60 ಲಕ್ಷ ರೂ ನಷ್ಟ ಅನುಭವಿಸಿದ್ದರು. ಈ ಹಾನಿಯನ್ನು ಅನ್ಯ ಮಾರ್ಗದಿಂದ ಸಂಗ್ರಹಿಸುವ ಉದ್ದೇಶದಿಂದ ವಾಮ ಮಾರ್ಗಕ್ಕೆ ಇಳಿದಿದ್ದರು.
125 ಕೋಟಿ ರೂ. ವಂಚನೆ ಪ್ರಕರಣ ಬೆಳಕಿಗೆ ಬರುವುದಕ್ಕೂ ಮುನ್ನ ಬಿಎಸ್ಎಫ್ ಅಧಿಕಾರಿ ಯಾದವ್ ಕೆಲವು ದಿನಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.