ಕಾಸರಗೋಡು: ಎಐಐಎಂಎಸ್(ಏಮ್ಸ್)ಸಂಸ್ಥೆ ಮಂಜೂರುಗೊಳಿಸುವಲ್ಲಿ ಕಾಸರಗೋಡಿನ ಹೆಸರನ್ನೂ ಒಳಪಡಿಸಿ ಕೇಂದ್ರಕ್ಕೆ ರವಾನಿಸುವಂತೆ ಒತ್ತಾಯಿಸಿ ಏಮ್ಸ್ ಕಾಸರಗೋಡು ಜನಪರ ಒಕ್ಕೂಟ ವತಿಯಿಂದ ಕಾಸರಗೋಡು ಹೊಸ ಬಸ್‍ನಿಲ್ದಾಣ ವಠಾರದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ನಿರಾಹಾರ ಮುಷ್ಕರ 12ದಿನ ದಾಟಿದೆ.
ಖ್ಯಾತ ಚಿತ್ರಕಲಾವಿದ ಸುರೇಂದ್ರನ್ ಕೂಕಾನಂ 12ನೇ ದಿನದ ಮುಷ್ಕರವನ್ನು ಉದ್ಘಾಟಿಸಿದರು. ಜಿಲ್ಲೆಯ ಎಂಡೋಸಲ್ಫಾಣ್ ದುಷ್ಪರಿಣಾಮಪೀಡಿತರ ತಾಯಂದಿರು ನಿರಾಹಾರ ಮುಷ್ಕರದಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು. ದೀರ್ಘ ಕಾಲದಿಂದ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ತಮ್ಮ ಕರುಳಕುಡಿಗಳನ್ನು ಉನ್ನತ ಚಿಕಿತ್ಸೆಗಾಗಿ ಇತರ ರಾಜ್ಯ ಅಥವಾ ಕೇರಳದ ಅನ್ಯ ಜಿಲ್ಲೆಗಳಿಗೆ ಕರೆದೊಯ್ಯಬೇಕಾದ ಪರಿಸ್ಥಿತಿಯಿದೆ. ಜಿಲ್ಲೆಯಲ್ಲಿ ಉನ್ನತ ಚಿಕಿತ್ಸೆ ಮರೀಚಿಕೆಯಾಗುತ್ತಿದ್ದು, ಏಮ್ಸ್ ಸ್ಥಾಪನೆಯಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಕಾಸರಗೋಡಿಗೆ ಪ್ರಥಮ ಆದ್ಯತೆ ಮೇರೆಗೆ ಏಮ್ಸ್ ಮಂಜೂರಾಗಿ ಲಭಿಸುವಂತೆ ಮಾಡಲು ಶ್ರಮಿಸಬೇಕು ಎಂಬುದಾಗಿ ಪ್ರತಿಭಟನಾಕಾರರು ತಮ್ಮ ಹಕ್ಕೊತ್ತಾಯ ಮಂಡಿಸಿದರು.