ನವದೆಹಲಿ: ಡಿಸೆಂಬರ್ 2021ರಲ್ಲಿ ಸಗಟು ಬೆಲೆ-ಆಧಾರಿತ ಹಣದುಬ್ಬರ ಶೇ. 13.56ಕ್ಕೆ ತಗ್ಗಿದೆ. ಆಹಾರದ ಬೆಲೆಗಳು ಇಳಿಯದಿದ್ದರೂ ತೈಲ, ಇಂಧನ ಮತ್ತು ತಯಾರಿಕೆ ಉತ್ಪನ್ನಗಳ ಬೆಲೆ ಮೃಧುತ್ವದ ಕಾರಣದಿಂದಾಗಿ ಸಗಟು ಬೆಲೆ ಆಧಾರಿತ ಹಣದುಬ್ಬರದಲ್ಲಿ ಇಳಿಕೆಯಾಗಿದೆ.
ಏಪ್ರಿಲ್ ಆರಂಭದೊಂದಿಗೆ ಸತತ ಒಂಬತ್ತನೇ ತಿಂಗಳು ಸಗಟು ಬೆಲೆ ಆಧಾರಿತ ಹಣದುಬ್ಬರ ಎರಡಂಕಿಯಲ್ಲಿಯೇ ಇದೆ. ನವೆಂಬರ್ ನಲ್ಲಿ ಹಣದುಬ್ಬರ ಶೇ. 14.23 ರಷ್ಟಿದ್ದರೆ, ಡಿಸೆಂಬರ್ 2020ರಲ್ಲಿ ಇದು ಶೇ. 1.95 ರಷ್ಟಿತ್ತು.
ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದ್ದರಿಂದ ಖನಿಜ ತೈಲಗಳು, ಮೂಲ ಲೋಹಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳು, ಆಹಾರ ಉತ್ಪನ್ನಗಳು, ಟೆಕ್ಸ್ ಟೈಲ್ , ಕಾಗದ ಉತ್ಪನ್ನಗಳು ಮತ್ತಿತರ ವಸ್ತುಗಳ ಬೆಲೆ ಏರಿಕೆಯಿಂದಾಗಿ ಡಿಸೆಂಬರ್ 2021ರಲ್ಲಿ ಹಣದುಬ್ಬರದಲ್ಲಿ ಏರಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ನವೆಂಬರ್ ತಿಂಗಳಿಗಿಂತ ಡಿಸೆಂಬರ್ ನಲ್ಲಿ ತಯಾರಿಕಾ ಉತ್ಪನ್ನಗಳಲ್ಲಿ ಹಣದುಬ್ಬರ ಶೇ. 10. 62 ರಷ್ಟಿತ್ತು. ತೈಲ ಮತ್ತು ವಿದ್ಯುತ್ ಉತ್ಪನ್ನಗಳ ಬೆಲೆ ಏರಿಕೆ ಶೇ. 32.30 ರಷ್ಟಿತ್ತು. ಆಹಾರ ಪದಾರ್ಥಗಳಲ್ಲಿನ ಹಣದುಬ್ಬರ ಶೇ. 9.56 ಹಾಗೂ ತರಕಾರಿ ಬೆಲೆ ಏರಿಕೆ ಶೇ. 31.56 ರಷ್ಟಿತ್ತು.