ನವದೆಹಲಿ: ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣದ ಇಬ್ಬರು ಆರೋಪಿಗಳಾದ ಮಯಾಂಕ್ ರಾವತ್ ಮತ್ತು ಶ್ವೇತಾ ಸಿಂಗ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳ ಪೊಲೀಸ್ ಬಂಧನ ಅವಧಿ ಶುಕ್ರವಾರ ಕೊನೆಗೊಂಡಿದ್ದು, ಇಂದು ವಿಚಾರಣೆ ನಡೆಸಿದ ಬಾಂದ್ರಾ ನ್ಯಾಯಾಲಯ, ಮುಂದಿನ ವಿಚಾರಣೆ ಸೋಮವಾರ, ಜನವರಿ 17ಕ್ಕೆ ಮುಂದೂಡಿದೆ ಎಂದು ರಾವತ್ ಅವರ ವಕೀಲ ಸಂದೀಪ್ ಶೇರ್ಖಾನೆ ಅವರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ರಾವತ್‍ಗೆ ಕೊರೋನಾ ದೃಢಪಟ್ಟ ಕಾರಣ ಮುಂಬೈನ ಕಲಿನಾ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಯಿತು. ಮೊದಲ ಆರೋಪಿ ವಿಶಾಲ್ ಕುಮಾರ್ ಝಾ ಕೂಡ ಕೆಲವು ದಿನಗಳ ಕೋವಿಡ್‍ಗೆ ತುತ್ತಾಗಿದ್ದರು. ಅವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು.
ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ಶ್ವೇತಾ ಸಿಂಗ್ ಪರ ವಕೀಲ ಎನ್ ದಾಸ್, ಸೈಬರ್ ಪೊಲೀಸ್ ಅಧಿಕಾರಿಯೊಬ್ಬರು ಆಕೆಗೆ ವಿಚಾರಣೆ ಸಂದರ್ಭದಲ್ಲಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಆರೋಪವನ್ನು ಮ್ಯಾಜಿಸ್ಟ್ರೇಟ್ ಕೋಮಲಸಿಂಗ್ ರಜಪೂತ್ ಗಮನಿಸಿದ್ದು, ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಡಿಸಿಪಿ ರಶ್ಮಿ ಕರಂಡಿಕರ್ ಅವರಿಗೆ ನಿರ್ದೇಶನ ನೀಡಿದ್ದಾರೆ.
ಪ್ರಕರಣವು ‘ಬುಲ್ಲಿ ಬಾಯಿ’ ಅಪ್ಲಿಕೇಶನ್ ಮೂಲಕ ಮುಸ್ಲಿಂ ಮಹಿಳೆಯರನ್ನು ಆನ್‍ಲೈನ್‍ನಲ್ಲಿ ಹರಾಜು ಹಾಕುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಉತ್ತರಾಖಂಡದ ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವತ್ ಮತ್ತು ಬೆಂಗಳೂರಿನಿಂದ ವಿಶಾಲ್ ಕುಮಾರ್ ಝಾ ಅವರನ್ನು ಮುಂಬೈ ಸೈಬರ್ ಪೊಲೀಸರು ಬಂಧಿಸಿದ್ದರು.