ಕಾಸರಗೋಡು : ವಿದುಷಿ ಉಷಾ ಈಶ್ವರ ಭಟ್ ಕಾಸರಗೋಡು ಇವರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಬೆಳ್ಳಿಹಬ್ಬ ಕಾರ್ಯಕ್ರಮವು ಜ.15 ಮತ್ತು ಜ.16ರಂದು ಕಾಸರಗೋಡು ಬೀರಂತಬೈಲಿನಲ್ಲಿರುವ ಲಲಿತ ಕಲಾ ಸದನದಲ್ಲಿ ನಡೆಯಲಿರುವುದು. ಜ.15ರಂದು ಅಪರಾಹ್ನ 2.30ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಮೃದಂಗವಾದಕ ವಿದ್ವಾನ್ ಎನ್. ಹರಿ ದೀಪ ಬೆಳಗಿಸಿ ಚಾಲನೆಯನ್ನು ನೀಡುವರು. ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್, ವಿದ್ವಾನ್ ಅಜಿತ್ ನಂಬೂದಿರಿ ತಿರುವನಂತಪುರಂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 3 ಗಂಟೆಯಿಂದ ವಿದ್ಯಾರ್ಥಿಗಳಿಂದ ಸಂಗೀತೋಪಾಸನಾ ನಡೆಯಲಿದೆ. ಅಪರಾಹ್ನ 4.30ರಿಂದ ವಿದುಷಿ ಎನ್.ಜೆ.ನಂದಿನಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಲಿದೆ. ವಯಲಿನ್‍ನಲ್ಲಿ ವಿದ್ವಾನ್ ವಿವೇಕ್ ರಾಜಾ ಕೆ.ಸಿ., ಮೃದಂಗದಲ್ಲಿ ವಿದ್ವಾನ್ ಎನ್.ಹರಿ, ಘಟಂನಲ್ಲಿ ವಿದ್ವಾನ್ ಕೋವೈ ಜಿ.ಸುರೇಶ್ ಜೊತೆಗೂಡಲಿದ್ದಾರೆ.
ಜ.16ರಂದು ಬೆಳಗ್ಗೆ 9.30ರಿಂದ ವಿದ್ಯಾರ್ಥಿಗಳಿಂದ ಸಂಗೀತೋಪಾಸನೆ ಜರಗಲಿದೆ. ವಿದ್ವಾನ್ ಪ್ರಭಾಕರ ಕುಂಜಾರು, ವಿದ್ವಾನ್ ಬಾಲರಾಜ್ ಬೆದ್ರಡಿ, ಡಾ. ಮಾಯಾ ಮಲ್ಯ, ವಿದ್ವಾನ್ ರಾಜೀವ್ ಗೋಪಾಲ್ ವೆಳ್ಳಿಕೋತ್, ವಿದ್ವಾನ್ ಕಣ್ಣನ್ ಕಾಞಂಗಾಡು, ವಿದ್ವಾನ್ ಶ್ರೀಧರ ಭಟ್ ಬಡಕ್ಕೇಕರೆ, ವಿದ್ವಾನ್ ಟಿ.ಕೆ.ವಾಸುದೇವ ಕಾಞಂಗಾಡು ಜೊತೆಗೂಡಲಿದ್ದಾರೆ. ಅಪರಾಹ್ನ 3.30ರಿಂದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಕಲಾವಿದರಿಗೆ ಹಾಗೂ ಅತಿಥಿಗಳಿಗೆ ಗೌರವಾರ್ಪಣೆ ನಡೆಯಲಿದೆ. 4.30ರಿಂದ ನಡೆಯಲಿರುವ ಪ್ರಧಾನ ಸಂಗೀತ ಕಛೇರಿಯಲ್ಲಿ ವಿದ್ವಾನ್ ಶ್ರೀವಲ್ಸನ್ ಜೆ.ಮೆನೋನ್ ಅವರಿಂದ ಹಾಡುಗಾರಿಕೆ, ವಯಲಿನ್‍ನಲ್ಲಿ ವಿದ್ವಾನ್ ಅವನೀಶ್ವರಮ್ ಎಸ್.ಆರ್.ವಿನು, ಮೃದಂಗದಲ್ಲಿ ಪಿ.ವಿ.ಅನಿಲ್ ಕುಮಾರ್, ಘಟಂನಲ್ಲಿ ಉಡುಪಿ ಎಸ್. ಶ್ರೀಧರ ಜೊತೆಗೂಡಲಿದ್ದಾರೆ ಎಂದು ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಈಶ್ವರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.