ನವದೆಹಲಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವಂತೆ ಕೋವಿಡ್-19ರ ವಿರುದ್ಧ ದಿಟ್ಟ ಹೋರಾಟ ನಡೆಸಲು 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕುವ ನೋಂದಣಿ ಶನಿವಾರ ಕೋ-ವಿನ್ ಪೋರ್ಟಲ್‌ನಲ್ಲಿ ಪ್ರಾರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಿಸಲು ನೋಂದಾವಣಿ ಮಾಡಿಕೊಳ್ಳುವಂತೆ ಜನತೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಮಕ್ಕಳು ಸುರಕ್ಷಿತವಾಗಿದ್ದರೆ ದೇಶದ ಭವಿಷ್ಯ ಸುರಕ್ಷಿತ! ಹೊಸ ವರ್ಷದ ಸಂದರ್ಭದಲ್ಲಿ, ಇಂದಿನಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ COVID19 ಲಸಿಕೆಗಾಗಿ COWIN ಪೋರ್ಟಲ್‌ನಲ್ಲಿ ನೋಂದಣಿಯನ್ನು ಪ್ರಾರಂಭಿಸಲಾಗುತ್ತಿದೆ. ಲಸಿಕೆಗಾಗಿ ಅರ್ಹ ಮಕ್ಕಳನ್ನು ನೋಂದಾಯಿಸಿಕೊಳ್ಳುವಂತೆ ಜನತೆಗೆ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ.
ಡಿಸೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರು.
ಪ್ರಧಾನಿ ಅವರ ಈ ಘೋಷಣೆ ಹಿನ್ನೆಲೆಯಲ್ಲಿ ಸೋಮವಾರದಿಂದ ಮಕ್ಕಳಿಗೆ ಲಸಿಕೆ ಹಾಕುವ ಕೆಲಸ ಪ್ರಾರಂಭವಾಗಲಿದೆ. ಅಷ್ಟೇ ಅಲ್ಲ, ಜನವರಿ 10 ರಿಂದ ಮೂರನೇ ಡೋಸ್ ಲಸಿಕೆ ನೀಡುವ ಕೆಲಸವೂ ಆರಂಭವಾಗಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರವು 'ಕೋವಾಕ್ಸಿನ್' ನ ಪೂರೈಕೆ ವೇಳಾಪಟ್ಟಿಯನ್ನು ಮುಂದಿನ ಕೆಲವು ದಿನಗಳಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳೊಂದಿಗೆ ಹಂಚಿಕೊಳ್ಳಲಿದೆ. ಸಂಭಾವ್ಯ ಫಲಾನುಭವಿಗಳು ಜನವರಿ 1, 2022 ರಿಂದ Co-WIN ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಜನವರಿ 3 ರಿಂದ ವ್ಯಾಕ್ಸಿನೇಷನ್ ಪ್ರಾರಂಭವಾದಾಗ ವಾಕ್-ಇನ್ ನೋಂದಣಿ ಸಹ ಮಾಡಿಕೊಳ್ಳಬಹುದು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.