ಚಂಡೀಗಢ: ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು 150 ಅಪರಿಚಿತರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 283 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಇದರ ಅಡಿಯಲ್ಲಿ, ತಪ್ಪಿತಸ್ಥರೆಂದು ಕಂಡುಬಂದರೆ, ಇನ್ನೂರು ರೂಪಾಯಿಗಳವರೆಗೆ ದಂಡವನ್ನು ವಿಧಿಸಬಹುದು. ಇದು ಜಾಮೀನು ನೀಡಬಹುದಾದ ಷರತ್ತು ಆಗಿದೆ.
ಪ್ರಧಾನಿ ಮೋದಿ ಫಿರೋಜ್‍ಪುರ ಭೇಟಿಯ ಸಂದರ್ಭದಲ್ಲಿ ಅವರ ಭದ್ರತೆಯಲ್ಲಿ ಗಂಭೀರ ಲೋಪಗಳ ಕುರಿತು ತನಿಖೆ ನಡೆಸುತ್ತಿರುವ ಕೇಂದ್ರ ತಂಡವು ಶುಕ್ರವಾರ ಪಂಜಾಬಿಗೆ ತಲುಪಿದೆ. ಮತ್ತೊಂದೆಡೆ ಪಂಜಾಬ್ ಸರ್ಕಾರವು ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ಈ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಹೇಳಿದೆ.
ಮೂಲಗಳ ಪ್ರಕಾರ, ಗುರುವಾರ ಗೃಹ ಸಚಿವಾಲಯ(ಎಂಎಚ್‍ಎ) ರಚಿಸಿರುವ ಮೂರು ಸದಸ್ಯರ ಸಮಿತಿಯು ಜನವರಿ 5 ರಂದು ಪ್ರಧಾನಿಯವರ ಭೇಟಿಯ ಸಂದರ್ಭದಲ್ಲಿ ಉಂಟಾದ ಲೋಪದ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದೆ.
ಮಂಜು ಕವಿದ ವಾತಾವರಣದ ನಡುವೆ ಬೆಳಗ್ಗೆ ಫಿರೋಜ್‍ಪುರ ಬಳಿಯ ಪಯರಾಯನ ಮೇಲ್ಸೇತುವೆಗೆ ಭೇಟಿ ನೀಡಿದ ಕೇಂದ್ರ ತಂಡವು 45 ನಿಮಿಷಗಳ ಕಾಲ ಸ್ಥಳದಲ್ಲಿಯೇ ಇದ್ದು ಪರಿಶೀಲನೆ ನಡೆಸಿದ್ದಲ್ಲದೇ, ಹಿರಿಯ ಪಂಜಾಬ್ ಪೊಲೀಸ್ ಮತ್ತು ನಾಗರಿಕ ಆಡಳಿತ ಅಧಿಕಾರಿಗಳೊಂದಿಗೆ ಸಂವಾದ ನಡೆಸಿತು.
ಸಮಿತಿಯು ಕ್ಯಾಬಿನೆಟ್ ಸೆಕ್ರೆಟರಿಯಟ್ ಕಾರ್ಯದರ್ಶಿ(ಭದ್ರತೆ) ಸುಧೀರ್ ಕುಮಾರ್ ಸಕ್ಸೇನಾ ನೇತೃತ್ವದಲ್ಲಿ ಗುಪ್ತಚರ ಬ್ಯೂರೋದ ಜಂಟಿ ನಿರ್ದೇಶಕ ಬಲ್ಬೀರ್ ಸಿಂಗ್, ಎಸ್ ಸುರೇಶ್, ಐಜಿ, ವಿಶೇಷ ರಕ್ಷಣಾ ಗುಂಪಿನ ಇತರ ಇಬ್ಬರು ಸದಸ್ಯರನ್ನು ಒಳಗೊಂಡಿದೆ.
ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದ್ದಾರೆ. ಆಪಾದಿತ ಲೋಪಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಗುರುವಾರ ತನ್ನದೇ ಆದ ದ್ವಿಸದಸ್ಯ ಸಮಿತಿಯನ್ನು ರಚಿಸಿದೆ. ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.