ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಲಸಿಕಾ ಅಭಿಯಾನದಲ್ಲಿ ದೇಶ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಶುಕ್ರವಾರದವರೆಗೂ ದೇಶಾದ್ಯಂತ 150 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ.
'ಇದೊಂದು ಚಾರಿತ್ರಿಕ ಘಟನೆಯಾಗಿದೆ. ಆರೋಗ್ಯ ಕಾರ್ಯಕರ್ತರ ಹಗಲಿರುಳು ಶ್ರಮದಿಂದ ಈ ಸಾಧನೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ ಹೇಳಿದ್ದಾರೆ. ಪ್ರತಿಯೊಬ್ಬರು ಒಟ್ಟಾಗಿ ಶ್ರಮಿಸಿದಾಗ ಯಾವುದೇ ಗುರಿ ತಲುಪಲು ಸಾಧ್ಯ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್ 21 ರಂದು ದೇಶದಲ್ಲಿ 100 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡುವುದರೊಂದಿಗೆ ದೇಶಾದ್ಯಂತ ಸಂಭ್ರಮಾಚರಣೆ ಮಾಡಲಾಗಿತ್ತು. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಶೇ. 91 ರಷ್ಟು ವಯಸ್ಕರು ಒಂದು ಡೋಸ್ ಪಡೆದಿದ್ದರೆ ಶೇ.66 ರಷ್ಟು ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ.
ಜನವರಿ 3 ರಿಂದ ಆರಂಭವಾಗಿರುವ 15 ರಿಂದ 18 ವರ್ಷದೊಳಗಿನ ಲಸಿಕೆ ನೀಡುವಿಕೆಯಲ್ಲಿ ಶೇಕಡಾ 22 ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಕಳೆದ ವರ್ಷ ಜನವರಿ 16 ರಿಂದ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿತ್ತು. ಫೆಬ್ರವರಿ 2 ರಿಂದ ಮುಂಚೂಣಿ ಕಾರ್ಯಕರ್ತರು ಹಾಗೂ ಮಾರ್ಚ್ 1 ರಿಂದ 60 ವರ್ಷಕ್ಕೂ ಮೇಲ್ಪಟ್ಟವವರು, ಸಹ ಅಸ್ವಸ್ಥತೆವುಳ್ಳವರಿಗೆ ಲಸಿಕೆ ನೀಡಿಕೆಯನ್ನು ಆರಂಭಿಸಲಾಗಿತ್ತು.