ನವದೆಹಲಿ: ಕೋವಿಡ್-19 ಹಾಗೂ ಇತರ ಕಾರಣಗಳಿಂದಾಗಿ 2020ರ ಏಪ್ರಿಲ್ 1ರಿಂದ ಈ ವರೆಗೆ ದೇಶದಲ್ಲಿ 1,47,492 ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಹೇಳಿದೆ.
ನವದೆಹಲಿ: ಕೋವಿಡ್-19 ಹಾಗೂ ಇತರ ಕಾರಣಗಳಿಂದಾಗಿ 2020ರ ಏಪ್ರಿಲ್ 1ರಿಂದ ಈ ವರೆಗೆ ದೇಶದಲ್ಲಿ 1,47,492 ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಹೇಳಿದೆ.
ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆಯೋಗ ಈ ಮಾಹಿತಿ ನೀಡಿದ್ದು, ಈ ಮಕ್ಕಳಲ್ಲಿ ತಂದೆ ಅಥವಾ ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡವರೂ ಸೇರಿದ್ದಾರೆ ಎಂದು ತಿಳಿಸಿದೆ.
ತನ್ನ 'ಬಾಲ ಸ್ವರಾಜ್ ಪೋರ್ಟಲ್- ಕೋವಿಡ್ 19'ನಲ್ಲಿ ಜನವರಿ 11 ವರೆಗೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅಪ್‌ಲೋಡ್ ಮಾಡಿರುವ ವಿವರಗಳನ್ನು ಆಧರಿಸಿ ಈ ಮಾಹಿತಿಯನ್ನು ಸಿದ್ಧಪಡಿಸಲಾಗಿದೆ ಎಂದು ಆಯೋಗದ ಪರ ವಕೀಲ ಸ್ವರೂಪಮಾ ಚತುರ್ವೇದಿ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
'ಆಯೋಗದ ಪೋರ್ಟ್‌ಲ್‌ನಲ್ಲಿನ ಮಾಹಿತಿಯಂತೆ, 10,094 ಮಕ್ಕಳು ಅನಾಥರಿದ್ದರೆ, 1,36,910 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ಪರಿತ್ಯಕ್ತ ಮಕ್ಕಳ ಸಂಖ್ಯೆ 488 ಇದ್ದು, ಒಟ್ಟು 1,47,492 ಮಕ್ಕಳಿಗೆ ಪಾಲನೆ ಹಾಗೂ ರಕ್ಷಣೆಯ ಅಗತ್ಯವಿದೆ' ಎಂದು ಆಯೋಗ ತಿಳಿಸಿದೆ.
'ಕೋವಿಡ್-19 ಪಿಡುಗು ಅಥವಾ ಅದರಿಂದಾಗಿ ಎದುರಾಗಿರುವ ಸಂಕಷ್ಟಗಳು ಈ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ' ಎಂದು ತಿಳಿಸಿದೆ.
'ಕೋವಿಡ್‌ನ ಸಂಭಾವ್ಯ ಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧ ಕೈಗೊಂಡಿರುವ ಸಿದ್ಧತೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತವಾಗಿ ವರ್ಚುವಲ್ ಮೂಲಕ ಸಭೆ ನಡೆಸಲಾಗುತ್ತಿದೆ' ಎಂದು ಆಯೋಗ ತಿಳಿಸಿದೆ.