ನವದೆಹಲಿ: ದೇಶದ ಹದಿಹರೆಯದ ಮಕ್ಕಳಿಗೆ (15ರಿಂದ 18 ವರ್ಷದೊಳಗಿನ) ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ದೇಶಾದ್ಯಂತ ಇಂದು ಸೋಮವಾರ (ಜ.3ಕ್ಕೆ) ಚಾಲನೆ ಸಿಕ್ಕಿದೆ. ಕೋವಿಡ್ ರೂಪಾಂತರಿ ಕೊರೋನಾ ಓಮಿಕ್ರಾನ್ ಸೋಂಕು ದೇಶಾದ್ಯಂತ ಹೆಚ್ಚಳ ಹಾಗೂ ಮೂರನೇ ಅಲೆಯ ಆತಂಕ ನಡುವೆ ಇಂದು ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭವಾಗಿದೆ.
ಕಳೆದ ಕೆಲ ದಿನಗಳಿಂದ ರಾಜಧಾನಿ ದೆಹಲಿಯಲ್ಲಿ ಓಮಿಕ್ರಾನ್ ಹಾಗೂ ಕೋವಿಡ್ ಸೋಂಕು ಅವ್ಯಾಹತವಾಗಿ ಏರಿಕೆಯಾಗುತ್ತಿದೆ. ದೆಹಲಿಯ ಫೋರ್ಟಿಸ್ ಆಸ್ಪತ್ರೆ, ಸರ್ ಗಂಗಾ ರಾಮ್ ಆಸ್ಪತ್ರೆ ಮತ್ತು ಇತರ ಕೇಂದ್ರಗಳಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.
ಕಳೆದ ಡಿಸೆಂಬರ್ 27ರಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಮಕ್ಕಳಿಗೆ ಸದ್ಯಕ್ಕೆ ಕೊವಾಕ್ಸಿನ್ ಲಸಿಕೆ ಮಾತ್ರ ನೀಡಲಾಗುತ್ತಿದೆ. ಇನ್ನು ಕೆಲವು ನಿರ್ದಿಷ್ಟ ಷರತ್ತುಗಳನ್ನು ವಿಧಿಸಿ ತುರ್ತು ಸಂದರ್ಭಗಳಲ್ಲಿ ಮಾತ್ರ ಬಯೋಟೆಕ್ ಸಂಸ್ಥೆಯ ಕೊವಾಕ್ಸಿನ್ ಲಸಿಕೆಯನ್ನು 12 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದೆಂದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (The Drugs Controller General of India ) ಅನುಮತಿ ನೀಡಿದೆ.
ನಿನ್ನೆ ಭಾನುವಾರದವರೆಗೆ ಸರ್ಕಾರದ ಕೋವಿಡ್ ಲಸಿಕೆ ನೋಂದಣಿ ಪೋರ್ಟಲ್ CoWIN ನಲ್ಲಿ 6 ಲಕ್ಷ ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ದೊಡ್ಡವರ ಲಸಿಕೆ ಮಿಶ್ರವಾಗದಂತೆ ಹಾಗೂ ಇತರ ಸಮಸ್ಯೆ ತಲೆದೋರಬಾರದು ಎಂದು ಪ್ರತ್ಯೇಕ ಲಸಿಕೆ ಕೇಂದ್ರಗಳು, ಸೆಷನ್ ಕೇಂದ್ರ, ಸರದಿ, ವಿವಿಧ ಲಸಿಕೆ ತಂಡಗಳನ್ನು ನಿಯೋಜಿಸುವಂತೆ ಕೇಂದ್ರ ಆರೋಗ್ಯ ಸಚಿವರು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದಾರೆ.
ಮಕ್ಕಳ ನೋಂದಣಿ ಪೋರ್ಟಲ್ ಕಳೆದ ಶನಿವಾರ ಮುಕ್ತವಾಗಿತ್ತು. ಸರ್ಕಾರದ ಮಾರ್ಗಸೂಚಿ ಪ್ರಕಾರ, CoWIN ನಲ್ಲಿ ಅಸ್ತಿತ್ವದಲ್ಲಿರುವ ಖಾತೆಯ ಮೂಲಕ ಆನ್‌ಲೈನ್‌ನಲ್ಲಿ ಸ್ವಯಂ-ನೋಂದಣಿ ಮಾಡಿಕೊಳ್ಳಬಹುದು ಅಥವಾ ಎಲ್ಲಾ ಇತರ ವರ್ಗದ ಫಲಾನುಭವಿಗಳಂತೆಯೇ ಮೊಬೈಲ್ ಸಂಖ್ಯೆಯ ಮೂಲಕ ಹೊಸ ಖಾತೆ ಮೂಲಕ ನೋಂದಾಯಿಸಿಕೊಲ್ಳಬಹುದು.
ಆದಷ್ಟು ಬೇಗ ಮಕ್ಕಳಿಗೆ ಕೊರೋನಾ ಲಸಿಕೆ ಕೊಡಿಸಿ: ಕೊರೋನಾವೈರಸ್ ಸಾಂಕ್ರಾಮಿಕದ ಮೂರನೇ ಅಲೆಯ ಭಯದ ಮಧ್ಯೆ ಪೋಷಕರು ತಮ್ಮ ಮಕ್ಕಳಿಗೆ ರಕ್ಷಣೆ ನೀಡಲು ಸಾಧ್ಯವಾದಷ್ಟು ಬೇಗ ಲಸಿಕೆಗೆ ಕರೆತರುವಂತೆ ವೈದ್ಯರು, ಆರೋಗ್ಯ ಸೇವೆ ಕಾರ್ಯಕರ್ತರು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.