ನವದೆಹಲಿ: ಸುಗಂಧದ್ರವ್ಯ ಉದ್ಯಮಿ ಪಿಯೂಶ್ ಜೈನ್ ಅವರಿಂದ ವಶಪಡಿಸಿಕೊಳ್ಳಲಾದ 200 ಕೋಟಿ ರೂ. ಮೌಲ್ಯದ ನಗದು ಹಣವು ಬಿಜೆಪಿಯ ಹಣವಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತಿಳಿಸಿದ್ದಾರೆ. ಕಾರ್ಯಸಾಧ್ಯವಾದ ಬೇಹುಗಾರಿಕಾ ವರದಿಗಳನ್ನು ಆಧರಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿಗಳನ್ನು ನಡೆಸಿದ್ದಾರೆಂದು ಅವರು ಹೇಳಿದ್ದಾರೆ.
ಜಿಎಸ್‌ಟಿ ಮಂಡಳಿ ಸಭೆಯ ಆನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾರ್ಯಸಾಧ್ಯವಾದ ಬೇಹುಗಾರಿಕಾ ಮಾಹಿತಿಗಳನ್ನು ಆಧರಿಸಿ ಆದಾಯ ತೆರಿಗೆ ಅಧಿಕಾರಿಗಳು ಕಾನೂನು ಜಾರಿ ಸಂಸ್ಥೆಗಳು ದಾಳಿಗಳನ್ನು ನಡೆಸುತ್ತವೆ ಎಂದು ಹೇಳಿದರು.
ಉತ್ತರಪ್ರದೇಶದ ಕನೌಜ್‌ನಲ್ಲಿ ಉದ್ಯಮಿ ಪಿಯೂಶ್ ಜೈನ್ ಅವರಿಂದ ವಶಪಡಿಸಿಕೊಳ್ಳಲಾದ ಹಣವು 197.49 ಕೋಟಿ ರೂ. ಬಿಜೆಪಿ ಪಕ್ಷಕ್ಕೆ ಸೇರಿದ್ದಾಗಿದೆ ಮತ್ತು ಐಟಿ ಅಧಿಕಾರಿಗಳು ಪ್ರಮಾದವಶಾತ್ ದಾಳಿಗಳನ್ನು ನಡೆಸಿದ್ದರು. ಇದೀಗ ಅವರು ನಿಜವಾಗಿ ಗುರಿಯಿರಿಸಿದ್ದಂತಹ ಪುಷ್ಪರಾಜ್ ಜೈನ್ ಅವರ ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆಂಬ ಪ್ರತಿಪಕ್ಷಗಳ ಟೀಕೆಯ ಬಗ್ಗೆ ಪ್ರಶ್ನಿಸಿದ ನಿರ್ಮಲಾ ಅವರು ಅದು ಬಿಜೆಪಿಗೆ ಸೇರಿದ ಹಣವಲ್ಲವೆಂದರು.
ಈ ಐಟಿ ದಾಳಿಗಳಿಂದಾಗಿ ಅಖಿಲೇಶ್ ಯಾದವ್ ತಬ್ಬಿಬ್ಬಾಗಿದ್ದಾರೆಂದು ನಿರ್ಮಲಾ ಕಟಕಿಯಾಡಿದರು. ವಶಪಡಿಸಿಕೊಳ್ಳಲಾದ ಹಣವು ಯಾರದೆಂದು ನಿಮಗೆ ಹೇಗೆ ಗೊತ್ತು?. ನೀವು ಅವರ ಪಾಲುದಾರರೇ?. ಯಾಕೆಂದರೆ ಕೇವಲ ಪಾಲುದಾರರಿಗೆ ಮಾತ್ರವೇ ಹಣವನ್ನು ಎಲ್ಲಿ ಇರಿಸಿದ್ದೇವೆಂದು ತಿಳಿದಿರುತ್ತದೆ'' ಎಂದು ನಿರ್ಮಲಾ ಅವರು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.