ನವದೆಹಲಿ: ವಿವಿಧ ರಾಜ್ಯಗಳು ಮತ್ತು ಅಧಿಕಾರಿಗಳು ಹೊರಡಿಸಿದ ಕೋವಿಡ್-19 ಲಸಿಕೆ ಕಡ್ಡಾಯ ಆದೇಶಗಳಿಂದಾಗಿ ಜನರು ತಮ್ಮ ಉದ್ಯೋಗ ಮತ್ತು ಪಡಿತರವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ವಾದಗಳನ್ನು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿರೋಧಿಸಿತು. ಯಾರೂ “ಏನನ್ನೂ ಕಳೆದುಕೊಳ್ಳುತ್ತಿಲ್ಲ” ಎಂದು ಹೇಳಿತು.
ಕೋವಿಡ್ ಲಸಿಕೆ ಕಡ್ಡಾಯ ಮತ್ತು ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳ ದತ್ತಾಂಶ ಬಹಿರಂಗ ವಿಷಯ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಷಯ ತಿಳಿಸಿದರು.
ಲಸಿಕೆ ಪಡೆಯದ ಜನರು ಉದ್ಯೋಗ ಕಳೆದುಕೊಳ್ಳುವುದಾಗಿ ಅನೇಕ ರಾಜ್ಯಗಳು ಮತ್ತಿತರ ಅಧಿಕಾರಿಗಳು ಆದೇಶ ಹೊರಡಿಸಿರುವುದಾಗಿ ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಹೇಳಿದರು. ಜನರು ಉದ್ಯೋಗ ಕಳೆದುಕೊಳ್ಳುತ್ತಿರುವುದರಿಂದ ಲಸಿಕೆ ಕಡ್ಡಾಯ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಭೂಷಣ್, ಲಸಿಕೆ ಕಡ್ಡಾಯ ಮಾಡಿರುವುದರಿಂದ ಜನರು ಸ್ವತಂತ್ರವಾಗಿ ಓಡಾಡಲು ಸಾಧ್ಯವಿಲ್ಲದಂತಾಗಿದೆ ಎಂದರು.
ಕೇಂದ್ರ ಸರ್ಕಾರದ ಪರವಾಗಿ ಉತ್ತರಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಲಸಿಕೆ ಕಡ್ಡಾಯದಿಂದ ಯಾರು ಕೂಡಾ ಏನನ್ನೂ ಕಳೆದುಕೊಳ್ಳುತ್ತಿಲ್ಲ. ಯಾರು ಕೂಡಾ ನಿಮ್ಮ ಮುಂದೆ ಬಂದಿಲ್ಲ ಎಂದು ತಿಳಿಸಿದರು. ಈ ವಿಷಯದ ಬಗ್ಗೆ ಅಂತಿಮ ವಿಚಾರಣೆ ನಡೆಸಿ ನಿರ್ಧರಿಸುವುದಾಗಿ ನ್ಯಾಯಪೀಠ ಹೇಳಿತು.