ನವದೆಹಲಿ: ವಿದ್ಯುತ್ ಕ್ಷೇತ್ರದ ನೌಕರರು ಫೆ.1 ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅಖಿಲ ಭಾರತ ವಿದ್ಯುತ್ ಇಂಜಿನಿಯರ್ಸ್ ಫೆಡರೇಷನ್ (ಎಐಪಿಇಎಫ್) ಹೇಳಿದೆ.
ಖಾಸಗೀಕರಣ ನೀತಿಗಳನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯುತ್ತಿದ್ದು, ಎಲೆಕ್ಟ್ರಿಸಿಟಿ ನೌಕರರು ಹಾಗೂ ಇಂಜಿನಿಯರ್ಸ್ ನ ರಾಷ್ಟ್ರೀಯ ಸಮನ್ವಯ ಸಮಿತಿ (ಎನ್ ಸಿಸಿಒಇಇಇ) ಈ ಪ್ರತಿಭಟನೆಗೆ ಕರೆ ನೀಡಿದೆ.
ಎನ್ ಸಿಸಿಒಇಇಇ ಹೇಳಿಕೆಯ ಪ್ರಕಾರ ತನ್ನ ಕೋರ್ ಕಮಿಟಿ ನಾಯಕರು, ಫೆ.1 ರಂದು ಪಂಜಾಬ್ ಗೌರ್ನರ್ ನ್ನು ಭೇಟಿ ಮಾಡಿ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ವಿದ್ಯುತ್ ಇಲಾಖೆಯ ಖಾಸಗೀಕರಣದ ವಿರುದ್ಧ ಮನವಿ ನೀಡಲು ನಿರ್ಧರಿಸಿದ್ದಾರೆ.
ಎನ್ ಸಿಸಿಒಇಇಇ ಕೋರ್ ಸಮಿತಿ ಪದಾಧಿಕಾರಿಗಳು ಫೆ.2 ರಂದು ಪುದುಚೆರಿಯ ವಿದ್ಯುತ್ ನೌಕರರ ಪ್ರತಿಭಟನಾ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಎಐಪಿಇಫ್ ನ ಅಧ್ಯಕ್ಷ ಶೈಲೇಂದ್ರ ದುಬೆ ಮಾತನಾಡಿದ್ದು, ಎನ್ ಸಿಸಿಒಇಇಇ 1.5 ಮಿಲಿಯನ್ ವಿದ್ಯುತ್ ನೌಕರರು ಹಾಗೂ ಇಂಜಿನಿಯರ್ ಗಳು ದೇಶವ್ಯಾಪಿ ಫೆ.1 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ವಿದ್ಯುತ್ (ತಿದ್ದುಪಡಿ) ಮಸೂದೆ-2021 ರ ರದ್ದತಿ, ಲಾಭ ಗಳಿಸುತ್ತಿರುವ ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ದಾದ್ರಾ ನಗರ್ ಹವೇಲಿ, ದಾಮನ್-ಡಿಯು ಹಾಗೂ ಪುದುಚೆರಿ ಗಳ ವಿದ್ಯುತ್ ಇಲಾಖೆಗಳನ್ನು ಖಾಸಗಿಕರಣಗೊಳಿಸುವುದನ್ನು ಹಿಂಪಡೆಯಬೇಕು, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ವಿದ್ಯುತ್ ನೌಕರರು ಮುಂದಿಟ್ಟಿದ್ದಾರೆ.