ನವದೆಹಲಿ: ಭಾರತದಲ್ಲಿ ಮಾರುತಿ ಸುಜುಕಿ(MSIL) ಅತಿದೊಡ್ಡ ಕಾರು ಮಾರಾಟ ಕಂಪೆನಿ ಮಾತ್ರವಲ್ಲದೆ ಹೊರಗೆ ವಿದೇಶಗಳಿಗೆ ರಫ್ತು ಮಾಡುವ ಅತಿದೊಡ್ಡ ಕಂಪೆನಿ ಕೂಡ ಆಗಿದೆ.
ಇದುವರೆಗೆ ಕೊರಿಯಾ ಮೂಲದ ಹುಂಡೈ ಕಂಪೆನಿ ಅತಿದೊಡ್ಡ ಕಾರು ರಫ್ತು ಕಂಪೆನಿ ಎನಿಸಿಕೊಂಡಿತ್ತು. ಅದನ್ನು ಕಳೆದ 2021ರಲ್ಲಿ ಮಾರುತಿ ಹಿಂದಿಕ್ಕಿದ್ದು 2 ಲಕ್ಷದ 5 ಸಾವಿರಕ್ಕೂ ಹೆಚ್ಚು ಕಾರುಗಳನ್ನು ರಫ್ತು ಮಾಡಿದೆ. 2020ಕ್ಕಿಂತ ಸುಮಾರು 85 ಸಾವಿರ ಹೆಚ್ಚು ಕಾರುಗಳು 2021ರಲ್ಲಿ ಕಂಪೆನಿ ಭಾರತದಿಂದ ರಫ್ತು ಮಾಡಿದೆ.
ಮಾರುತಿ ಕಂಪೆನಿ ಹುಂಡೈಗಿಂತ ಸುಮಾರು 75 ಸಾವಿರ ಹೆಚ್ಚು ಕಾರುಗಳನ್ನು ರಫ್ತು ಮಾಡಿದ್ದು, ಕಳೆದ ಆರ್ಥಿಕ ಸಾಲಿನಲ್ಲಿ ಹುಂಡೈ 1 ಲಕ್ಷದ 30 ಸಾವಿರದ 380 ಕಾರುಗಳನ್ನು ಮಾರಾಟ ಮಾಡಿದ್ದು 2020ಕ್ಕಿಂತ ಶೇಕಡಾ 31.8ರಷ್ಟು ಮಾತ್ರ ಹೆಚ್ಚಳವಾಗಿದೆ. ಅಮೆರಿಕ ಮೂಲದ ಫೋರ್ಡ್ ಕಂಪೆನಿ ಕಾರುಗಳಿಗೆ ಸಹ ಕಳೆದ ವರ್ಷ ಹೆಚ್ಚು ಬೇಡಿಕೆ ಬಂದಿತ್ತು. ಫೋರ್ಡ್ ಕಂಪೆನಿ ತನ್ನ ವ್ಯಾಪಾರ ಕುಸಿದಿದೆ ಎಂದು ಕಳೆದ ವರ್ಷ ಭಾರತದಲ್ಲಿ ತನ್ನ ಉತ್ಪಾದನಾ ಘಟಕವನ್ನು ಮುಚ್ಚಲು ನೋಡಿತ್ತು.
ನಮ್ಮ ಕಂಪೆನಿಯ ಈ ಮೈಲಿಗಲ್ಲು ಕಾರುಗಳ ಗುಣಮಟ್ಟ, ತಂತ್ರಜ್ಞಾನ, ವಿಶ್ವಾಸಾರ್ಹತೆ, ಕಾರ್ಯಕ್ಷಮತೆ ಮತ್ತು ವೆಚ್ಚ-ಪರಿಣಾಮಕಾರಿತ್ವದಲ್ಲಿ ಪ್ರಪಂಚದಾದ್ಯಂತದ ಗ್ರಾಹಕರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಜಾಗತಿಕ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ನಾವು ಬದ್ಧರಾಗಿರುತ್ತೇವೆ , ನಮ್ಮ ಈ ಪಯಣವನ್ನು ಮುಂದುವರಿಯುತ್ತೇವೆ ಎಂದು ಮಾರುತಿ ಸುಜುಕಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕೆನಿಚಿ ಆಯುಕವ ಹೇಳಿದ್ದಾರೆ.
ಆದಾಗ್ಯೂ, ಜಾಗತಿಕ ಚಿಪ್ ಕೊರತೆಯಿಂದ ವಾಹನ ತಯಾರಕರ ಉತ್ಪಾದನಾ ಸಾಮರ್ಥ್ಯದ ಮೇಲೆ ತೀವ್ರ ಹೊಡೆತ ಬಿದ್ದು ಮಾರುತಿ ಮತ್ತು ಹ್ಯುಂಡೈ ದೇಶೀಯ ಮಾರಾಟವು ಒತ್ತಡದಲ್ಲಿಯೇ ಮುಂದುವರಿದಿದೆ. 2021ರಲ್ಲಿ ಮಾರುತಿಯ ಅಗ್ರ ಐದು ರಫ್ತು ಮಾಡೆಲ್‌ಗಳಲ್ಲಿ ಬಲೆನೊ, ಡಿಜೈರ್, ಸ್ವಿಫ್ಟ್, ಸ್ಪ್ರೆಸೊ ಮತ್ತು ಬ್ರೆಜ್ಜಾ ಸೇರಿವೆ.
ಮಾರುತಿ ವಾಹನಗಳು ಲ್ಯಾಟಿನ್ ಅಮೇರಿಕಾ, ಆಸಿಯಾನ್, ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ನೆರೆಯ ಪ್ರದೇಶಗಳಲ್ಲಿ ಜನಪ್ರಿಯವಾಗಿವೆ.
2021ರಲ್ಲಿ ದ್ವಿಚಕ್ರ ವಾಹನಗಳಲ್ಲಿ, ಪುಣೆ ಮೂಲದ ಬಜಾಜ್ ಆಟೋ ರಫ್ತು ಮಾರುಕಟ್ಟೆಗಳಲ್ಲಿ ಮುಂಚೂಣಿಯಲ್ಲಿತ್ತು. 2021 ರಲ್ಲಿ 25 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಮಾರಾಟವಾದವು. ಇದು ಹಿಂದಿನ ವರ್ಷಕ್ಕಿಂತ 30% ಹೆಚ್ಚಳವಾಗಿದೆ. 2021ರಲ್ಲಿ ದ್ವಿಚಕ್ರ ವಾಹನಗಳ ರಫ್ತು 22 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳಾಗಿದ್ದರೆ ಮೂರು-ಚಕ್ರ ವಾಹನ ಮತ್ತು ಕ್ವಾಡ್ರಿ ಸೈಕಲ್ ಮಾರಾಟವು 3 ಲಕ್ಷಕ್ಕೂ ಹೆಚ್ಚು ಆಗಿವೆ.
ಹೊಸ ವರ್ಷವು ಬ್ರೆಜಿಲ್ ಮತ್ತು ಪಶ್ಚಿಮ ಯುರೋಪಿನಂತಹ ಪ್ರಮುಖ ಮಾರುಕಟ್ಟೆಗಳಿಗೆ ಮತ್ತಷ್ಟು ಜನಪ್ರಿಯವಾಗಲಿದೆ. ಹೊಸದಾಗಿ ಬಿಡುಗಡೆಯಾದ ಪಲ್ಸರ್ 250 ಮತ್ತು ಟಾಪ್-ಎಂಡ್ ಡೊಮಿನಾರ್ ಪೋರ್ಟ್‌ಫೋಲಿಯೊ ಪ್ರೀಮಿಯಂ ಮಾರುಕಟ್ಟೆಯಲ್ಲಿ ವಿಸ್ತರಣೆ ಕಂಡವು.
ಟಿವಿಎಸ್ ಮೋಟಾರ್ ಪ್ರತಿ ತಿಂಗಳು ಸುಮಾರು 80 ಸಾವಿರದಿಂದ 1 ಲಕ್ಷ ಕಾರುಗಳನ್ನು ರವಾನಿಸುತ್ತದೆ. ಹೀರೋ ಮೋಟೋಕಾರ್ಪ್ ಮತ್ತು ಹೋಂಡಾ 2-ವೀಲರ್‌ಗಳು ಸಾಗರೋತ್ತರ ಮಾರುಕಟ್ಟೆಯಲ್ಲಿ ಸಣ್ಣ ಪಾಲನ್ನು ಹೊಂದಿವೆ.