ನವದೆಹಲಿ: ಜನವರಿ 9ರಂದು ದೇಶದಾದ್ಯಂತ ಪ್ರವಾಸಿ ಭಾರತೀಯ ದಿವಸ್ (Pravasi Bharatiya Divas) ಆಚರಿಸಲಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ವಿದೇಶಗಳಲ್ಲಿ ಅನಿವಾಸಿ ಭಾರತೀಯರು ನೀಡುವ ಕೊಡುಗೆ ಸ್ಮರಿಸುವ ದಿನ ಇದಾಗಿದೆ.
ಭಾರತದಲ್ಲಿ ಜನಿಸಿ ಉದ್ಯೋಗ ಅರಸಿಕೊಂಡು ಹೋಗಿರುವ ಕೋಟ್ಯಂತರ ಮಂದಿ ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಜ.9 ರಂದೇ ಪ್ರವಾಸಿ ಭಾರತೀಯ ದಿವಸ್ ಆಚರಣೆ ಯಾಕೆ?
1915ರ ಜ.9ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ ಆಗಿದ್ದರು. ಬಳಿಕ ಅವರು ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗಾಂಧೀಜಿಯವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಭಾರತ ಸರ್ಕಾರ ಜ. 9 ಅನ್ನು 'ಪ್ರವಾಸಿ ಭಾರತೀಯ ದಿವಸ್' ಆಗಿ ಆಚರಿಸುವುದಾಗಿ ಘೋಷಿಸಿದೆ.
ಈ ಆಚರಣೆಯ ಹಿನ್ನೆಲೆ ಏನು?
ದೇಶದಲ್ಲಿ 2003ರಿಂದ ಪ್ರವಾಸಿ ಭಾರತೀಯ ದಿವಸ್ ಅನ್ನು ಆಚರಿಸಲಾಗುತ್ತಿದೆ. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ವಾಣಿಜ್ಯ ಮಂಡಳಿ ಒಕ್ಕೂಟ, ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಸಹಯೋಗದಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ಪ್ರತಿ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಈ ಆಚರಣೆಯನ್ನು 2015ರ ಬಳಿಕ ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತಿದೆ. ಈ ದಿನ ನಡೆಯುವ ಸಮಾವೇಶದಲ್ಲಿ ಅನಿವಾಸಿ ಭಾರತೀಯರಿಗಾಗಿ ಭಾರತ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.
ಕಳೆದ ಬಾರಿ 'ಪ್ರವಾಸಿ ಭಾರತೀಯ ದಿವಸ್' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಅನಿವಾಸಿ ಭಾರತೀಯರ ಜತೆ ಸಂವಾದ ನಡೆಸಿದ್ದರು.
ಕಾರ್ಯಕ್ರಮದ ಪರಿಕಲ್ಪನೆ
ಪ್ರತಿ ವರ್ಷದ ಸಮಾವೇಶವನ್ನು ನಿರ್ದಿಷ್ಟ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗುತ್ತದೆ. ಕಳೆದ ಬಾರಿಯ ಕಾರ್ಯಕ್ರಮವನ್ನು 'ಆತ್ಮ ನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) ದಲ್ಲಿ ವಲಸೆಗಾರರ ಪಾತ್ರ' ಎಂಬ ಪರಿಕಲ್ಪನೆಯಡಿ ಆಯೋಜಿಸಲಾಗಿತ್ತು.
ಸಮಾವೇಶ ಎಲ್ಲೆಲ್ಲಿ ನಡೆಯುತ್ತದೆ?
ದೇಶದ ಪ್ರಮುಖ ನಗರದಲ್ಲಿ ಸಮಾವೇಶ ನಡೆಸುವ ಮೂಲಕ ಆಚರಿಸಲಾಗುತ್ತದೆ. 2003ರ ಸಮಾವೇಶ ದೆಹಲಿಯಲ್ಲಿ ನಡೆಸಲಾಗಿತ್ತು. 2015ರ ಸಮಾವೇಶ ವಾರಾಣಸಿಯಲ್ಲಿ ನಡೆದಿತ್ತು. 2017ರಲ್ಲಿ ಬೆಂಗಳೂರಿನಲ್ಲಿ ಸಮಾವೇಶ ಆಯೋಜಿಸಲಾಗಿತ್ತು. 2019ರಲ್ಲಿ ಕೋವಿಡ್‌ನಿಂದಾಗಿ ವರ್ಚುವಲ್ ಸಮಾರಂಭ ನಡೆಸಲಾಗಿತ್ತು. ಈವರೆಗೆ ಒಟ್ಟು 16 ಸಮಾವೇಶಗಳು ನಡೆದಿವೆ.