HEALTH TIPS

ಆರ್ಥಿಕತೆ ಆಶಾವಾದ: ಕೇಂದ್ರ ಬಜೆಟ್ 2022; ದಿನಗಣನೆ

            ಸಂಸತ್​ನ ಬಜೆಟ್ ಅಧಿವೇಶನ ಜ.31ರಂದು ಶುರುವಾಗಲಿದೆ. ಫೆ.1ರ ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂಗಡಪತ್ರ ಮಂಡನೆ ಮಾಡಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಕಳೆದ ಶುಕ್ರವಾರ ರಾಷ್ಟ್ರೀಯ ಸಾಂಖ್ಯಿಕ ಕಚೇರಿ 2021-22ರ ರಾಷ್ಟ್ರೀಯ ಆದಾಯದ ಮೊದಲ ಮುಂಗಡ ಅಂದಾಜು ವಿವರಗಳನ್ನು ಪ್ರಕಟಿಸಿದೆ.

           ಇದು ವಾರ್ಷಿಕ ಮುಂಗಡಪತ್ರ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರೊಂದಿಗೆ ದೇಶದ ಸದ್ಯದ ಆರ್ಥಿಕ ಸ್ಥಿತಿಗತಿಯ ಅವಲೋಕನ ಇಲ್ಲಿದೆ.


          ಕೋವಿಡ್-19 ಸಂಕಷ್ಟದ ಕಾರಣ ಕಳೆದ ಮೂರು ವರ್ಷಗಳಿಂದ ದೇಶದ ಅರ್ಥವ್ಯವಸ್ಥೆಯೂ ಕಠಿಣ ಹಾದಿಯನ್ನು ಎದುರಿಸುತ್ತಿದೆ. ನಿರೀಕ್ಷಿಸಿದಂತೆ ಆರ್ಥಿಕ ಪ್ರಗತಿ ದಾಖಲಾಗಿಲ್ಲ. ಆದಾಗ್ಯೂ ಜಗತ್ತಿನ ಇತರೆ ಅರ್ಥ ವ್ಯವಸ್ಥೆಗಳ ಚೇತರಿಕೆ ಗಮನಿಸಿದರೆ ಭಾರತದ ಅರ್ಥವ್ಯವಸ್ಥೆಯ ಚೇತರಿಕೆ ಆಶಾದಾಯಕ ಬೆಳವಣಿಗೆಯನ್ನು ದಾಖಲಿಸುತ್ತ ಬಂದಿರುವುದು ವಿಶೇಷ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ಪ್ರಕಟಿಸಿದ ದತ್ತಾಂಶ ಪ್ರಕಾರ, ದೇಶದ ಜಿಡಿಪಿ ಬೆಳವಣಿಗೆ ಪ್ರಸಕ್ತ ಸಾಲಿನಲ್ಲಿ ಶೇಕಡ 9.2 ತಲುಪಬಹುದು. ಬೆಂಚ್​ವಾರ್ಕ್ ಇಂಡಿಕೇಟರ್ ವಿಧಾನದ ಮೂಲಕ ಈ ಮುನ್ನೋಟವನ್ನು ಎನ್​ಎಸ್​ಒ ಅಂದಾಜಿಸಿದೆ. ಹಾಗಿದ್ದರೂ ಇದು ಭಾರತೀಯ ರಿಸರ್ವ್ ಬ್ಯಾಂಕಿನ ಮುನ್ನೋಟ ಶೇಕಡ 9.5ಕ್ಕೆ ಹೋಲಿಸಿದರೆ ಕಡಿಮೆ ಇದೆ. 2020ನೇ ಸಾಲಿನ ಹಣಕಾಸು ವರ್ಷದಲ್ಲಿದ್ದಂತೆ ಕಠಿಣ ಲಾಕ್​ಡೌನ್​ಗಳು ಇಲ್ಲದ ಕಾರಣ ಭಾರತದ ಆರ್ಥಿಕತೆ ವಾಪಸ್ ಹಳಿಗೆ ಮರಳತೊಡಗಿದೆ ಎಂದು ಪರಿಣತರು ಹೇಳುತ್ತಿದ್ದಾರೆ. ಆದಾಗ್ಯೂ, ನಿಖರ ಜಿಡಿಪಿ 2020ಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಶೇಕಡ 1.3 ಮಾತ್ರ ಏರಿಕೆ ನಿರೀಕ್ಷಿಸಬಹುದಾಗಿದೆ. ಸಾಂಕೇತಿಕ ಜಿಡಿಪಿ ಲೆಕ್ಕಾಚಾರದ ಪ್ರಕಾರ 2021ರ ಹಣಕಾಸು ವರ್ಷದಲ್ಲಿ ಶೇಕಡ 17.6 ಅಂದಾಜಿಸಿದ್ದು ಶೇಕಡ 3 ಕಡಿಮೆ ಆಗಿದೆ. ಕಳೆದ ವರ್ಷ ಫೆಬ್ರವರಿ ಬಜೆಟ್ ಲೆಕ್ಕಾಚಾರ ಪ್ರಕಾರ ಶೇಕಡ 14.4 ಬೆಳವಣಿಗೆ ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ. ವಿವಿಧ ಅಂದಾಜುಗಳ ಪ್ರಕಾರ, ವಾಸ್ತವ ಜಿಡಿಪಿಗೆ ಒಟ್ಟು ನಿಶ್ಚಿತ ಬಂಡವಾಳ ರಚನೆಯ ಕೊಡುಗೆ ಶೇಕಡ 32.9 ಎಂದು ಪ್ರಸಕ್ತ ವರ್ಷದ ಮಟ್ಟಿಗೆ ಅಂದಾಜಿಸಲಾಗಿದೆ. ಇದು ಕಳೆದ ವರ್ಷ ಶೇಕಡ 31.2, ಹಿಂದಿನ ವರ್ಷ 32.5 ಇತ್ತು.

    

         ವಿತ್ತೀಯ ಕೊರತೆ ಲೆಕ್ಕಾಚಾರ: ಸಾಂಕೇತಿಕ ಜಿಡಿಪಿ ಬೆಳವಣಿಗೆ ದರ ಹೆಚ್ಚಿರುವ ಕಾರಣ ಜಿಡಿಪಿಯ ವಿತ್ತೀಯಕೊರತೆ ಲೆಕ್ಕಾಚಾರವೂ ಗಣನೀಯವಾಗುತ್ತದೆ. ಒಂದೊಮ್ಮೆ ಕೇಂದ್ರ ಸರ್ಕಾರ ಕಳೆದ ವರ್ಷ ಮಂಡಿಸಿದ ಬಜೆಟ್ ಪ್ರಕಾರವೇ ಎಲ್ಲ ಆದಾಯ ಕೂಡ ಇದ್ದು, ಆ ಗುರಿ ಸಾಧಿತವಾಗಿದ್ದರೆ ವಿತ್ತೀಯ ಕೊರತೆ ಕೂಡ ಅಂದಾಜು 71,000 ಕೋಟಿ ರೂಪಾಯಿ ಆಸುಪಾಸಿನಲ್ಲೇ ಇರಲಿದೆ.            ಅಂದಾಜಿಸಿದಂತೆಯೇ ಜಿಡಿಪಿಯ ಶೇಕಡ 6.8 ಪಾಲು ಈ ವಿತ್ತೀಯ ಕೊರತೆಯದ್ದಾಗುತ್ತದೆ.

             ಅಂದಾಜು ಮೀರಿದ ಖರ್ಚು: ಪ್ರಸಕ್ತ ಹಣಕಾಸು ವರ್ಷ ಸರ್ಕಾರದ ಅಂದಾಜು ಮೀರಿ ಖರ್ಚುಗಳಾಗಿವೆ. ಕಳೆದ ವರ್ಷ ಮಂಡಿಸಿದ ಬಜೆಟ್​ನಲ್ಲಿ ಅಂದಾಜಿಸಿದ್ದಕ್ಕಿಂತ 3.28 ಲಕ್ಷ ಕೋಟಿ ರೂಪಾಯಿ ಹೆಚ್ಚು ಖರ್ಚಾಗಿದೆ. ತೆರಿಗೆ ಮತ್ತು ಇತರೆ ಆದಾಯಗಳ ಮೂಲಕ ಇದನ್ನು ಸರಿದೂಗಿಸುವ ಲೆಕ್ಕಾಚಾರದಲ್ಲಿ ಸರ್ಕಾರವಿದೆ. ಆದಾಗ್ಯೂ, ಎಲ್​ಐಸಿ ಐಪಿಒ ಮೂಲಕ 1 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸುವ ಕಡೆಗೂ ಸರ್ಕಾರ ಗಮನಹರಿಸಿದೆ.

              ಗ್ರಾಹಕ ಖರ್ಚು ಸಾಮರ್ಥ್ಯ: ಪ್ರಸಕ್ತ ವರ್ಷದ ಜಿಡಿಪಿಯಲ್ಲಿ ಗ್ರಾಹಕ ಖರ್ಚು (ಕನ್ಸೂಮರ್ ಸ್ಪೆಂಡಿಂಗ್) ಸಾಮರ್ಥ್ಯ ಶೇಕಡ 54.8 ಅಂದಾಜಿಸಲಾಗಿದೆ. ಕಳೆದ ವರ್ಷ ಶೇಕಡ 56, ಹಿಂದಿನ ವರ್ಷ ಶೇಕಡ 57.1 ಇತ್ತು. ನಿಖರವಾಗಿ ಹೇಳಬೇಕು ಎಂದರೆ ಇನ್ನೂ ಶೇಕಡ 6.9 ಏರಿದರಷ್ಟೆ ಹಿಂದಿನ ವರ್ಷದ ಲೆಕ್ಕಾಚಾರವನ್ನು ಮೀರಲು ಸಾಧ್ಯವಿದೆ. ಈ ವಿದ್ಯಮಾನ ಭಾರತದ ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿದೆ ಎಂಬುದನ್ನು ಬಿಂಬಿಸುವ ಸಂಕೇತ ಎಂದು ಪರಿಣತರು ಹೇಳಿದ್ದಾರೆ.

K ಆಕಾರದ ರಿಕವರಿ

  | ರಘುರಾಮ್ ರಾಜನ್ ಆರ್​                                                                                                              ಬಿಐ ಮಾಜಿ ಗವರ್ನರ್

          ದೇಶದ ಅರ್ಥವ್ಯವಸ್ಥೆ ಮಧ್ಯಮವರ್ಗದ ಜನರನ್ನು ಬೆದರಿಸುವ ರೀತಿಯಲ್ಲಿ ರೂಪುಗೊಳ್ಳುತ್ತಿದೆ. ತಂತ್ರಜ್ಞಾನ ಆಧಾರಿತ ಸಂಸ್ಥೆಗಳು, ಬೃಹತ್ ಬಂಡವಾಳ ಹೂಡಿಕೆ ಸಂಸ್ಥೆಗಳು ಕ್ಷಿಪ್ರ ವೇಗದ ಚೇತರಿಕೆ ತೋರಿಸುತ್ತಿವೆ. ಆದರೆ, ಸಣ್ಣ, ಮಧ್ಯಮ ವರ್ಗದ ಉದ್ಯಮಗಳಿಗೂ ತೊಂದರೆ ಆಗಿದೆ. ಬಹುಪ್ರಮಾಣದ ಬಳಕೆಯ ವಸ್ತುಗಳ ಬೇಡಿಕೆ ಕಡಿಮೆ ಆಗಿದೆ. ಜನಸಾಮಾನ್ಯರೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಈ ಹಂತದಲ್ಲಿ ಖರ್ಚು-ವೆಚ್ಚದ ಬಗ್ಗೆ ನಿಗಾವಹಿಸಬೇಕಾದ್ದು ಅವಶ್ಯ. ದೊಡ್ಡ ಪ್ರಮಾಣದ ವಿತ್ತೀಯ ಕೊರತೆ ಇಲ್ಲದ ಕಾರಣ, ಸರ್ಕಾರ 'ಓ' ಆಕಾರದ ರಿಕವರಿ ಕಡೆಗೆ ಗಮನ ಕೇಂದ್ರೀಕರಿಸಬೇಕು.

ಅರ್ಥವ್ಯವಸ್ಥೆ ಚೇತರಿಕೆ ಕಂಡಿದೆ

  | ಅರವಿಂದ ಪನಗರಿಯಾ                                                                                                           ನೀತಿ ಆಯೋಗದ ಉಪಾಧ್ಯಕ್ಷ

              ದೇಶದ ಅರ್ಥವ್ಯವಸ್ಥೆ ಕೋವಿಡ್ ಸಂಕಷ್ಟಗಳನ್ನು ಎದುರಿಸಿಯೂ 'ಗಮನಾರ್ಹ'ವಾಗಿ ಚೇತರಿಕೆಯನ್ನು ಕೂಡ ತೋರಿಸಿದೆ. ಬೆಳವಣಿಗೆ ದರ ಶೇಕಡ 7ರಿಂದ 8ರ ನಡುವೆ ಮುಂದುವರಿಯಲಿದ್ದು ಸ್ಥಿರತೆಯನ್ನೂ ಅದು ತೋರಿಸಲಿದೆ. ನಮ್ಮ ಸಾಮರ್ಥ್ಯ ಮೀರಿ ನಾವು ಬದುಕಬಾರದು. ಹಾಗೆ ಮಾಡಿದರೆ ಮುಂದಿನ ತಲೆಮಾರಿನ ಮೇಲೆ ನಾವು ದೊಡ್ಡ ಪ್ರಮಾಣದ ಸಾಲವನ್ನು ಹೊರಿಸುತ್ತಿದ್ದೇವೆ ಎಂದು ಅರ್ಥ. ದೇಶದಲ್ಲಿ ವಿತ್ತೀಯ ಕೊರತೆ 2020-21ರಲ್ಲಿ ಶೇಕಡ 9.5ಕ್ಕೆ ಏರಿತ್ತು. ಪ್ರಸಕ್ತ ವರ್ಷ ಅದನ್ನು ಶೇಕಡ 6.8ಕ್ಕೆ ಇಳಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಹಣದುಬ್ಬರ ಪ್ರಮಾಣವೂ ನಿಯಂತ್ರಣದಲ್ಲಿದೆ. ಜಗತ್ತಿನ ಮುಂಚೂಣಿ ರಾಷ್ಟ್ರಗಳು ಹಣದುಬ್ಬರದಿಂದ ತತ್ತರಿಸಿವೆ. ಅಮೆರಿಕದಲ್ಲಿ ಕಳೆದ 40 ವರ್ಷಗಳಲ್ಲೇ ಗರಿಷ್ಠ ಹಣದುಬ್ಬರ ಶೇಕಡ 7 ತಲುಪಿದೆ. ಆದರೆ ಭಾರತದಲ್ಲಿ ಹಾಗಾಗಿಲ್ಲ. ಅದು ಶೇಕಡ 2ರಿಂದ 6 ನಡುವೆ ಇದೆ. ಚಿಲ್ಲರೆ ಹಣದುಬ್ಬರ ಪ್ರಮಾಣ ಡಿಸೆಂಬರ್​ನಲ್ಲಿ ಶೇಕಡ 5.59ಕ್ಕೆ ಏರಿದೆ. ಸಗಟು ಮಾರಾಟದರ ಆಧಾರಿತ ಹಣದುಬ್ಬರ ಶೇಕಡ 13.56 ತಲುಪಿದ್ದು ಇಳಿದಿದೆ. ಭಾರತದ ಅರ್ಥವ್ಯವಸ್ಥೆಯನ್ನು ಸರಿದೂಗಿಸುವುದಕ್ಕೆ ಬೇಕಾದ ಕ್ರಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ತೆಗೆದುಕೊಳ್ಳುತ್ತಿದೆ. ಹೀಗಾಗಿ ದೇಶದ ಅರ್ಥವ್ಯವಸ್ಥೆ ಉತ್ತಮ ಚೇತರಿಕೆಯನ್ನೇ ತೋರಿದೆ.

(ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು)

| ರಘುರಾಮ್ ರಾಜನ್ ಆರ್​ಬಿಐ ಮಾಜಿ ಗವರ್ನರ್

| ಅರವಿಂದ ಪನಗರಿಯಾ ನೀತಿ ಆಯೋಗದ ಉಪಾಧ್ಯಕ್ಷ

(ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು)

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries