ವಾಷಿಂಗ್ಟನ್(ಯುಎಸ್): ಅಮೆರಿಕ ಅಧ್ಯಕ್ಷರಾಗಿ ಜೊ ಬೈಡನ್ (Joe Biden)ಅಧಿಕಾರ ವಹಿಸಿಕೊಂಡು ಇಂದು ಗುರುವಾರ(ಜ.20)ಕ್ಕೆ ಒಂದು ವರ್ಷವಾಗಿದೆ.
2024ನೇ ಅಧ್ಯಕ್ಷೀಯ ಚುನಾವಣೆಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್(Kamala Harris) ತಮ್ಮ ಉತ್ತರಾಧಿಕಾರಿ(Running mate) ಎಂದು ಜೊ ಬೈಡನ್ ಘೋಷಿಸಿದ್ದಾರೆ.
ಕಮಲಾ ಹ್ಯಾರಿಸ್ ಅವರ ಕೆಲಸದ ಮೇಲೆ ತಮಗೆ ನಂಬಿಕೆ, ವಿಶ್ವಾಸ-ತೃಪ್ತಿಯಿದೆಯೇ, ಮುಂದಿನ ಚುನಾವಣೆಯಲ್ಲಿ ತಮ್ಮ ಉತ್ತರಾಧಿಕಾರಿಯಾಗುತ್ತಾರೆಯೇ ಎಂದು ಸುದ್ದಿಗಾರರು ಕೇಳಿದಾಗ ಜೊ ಬೈಡನ್ ಒಂದು ಕ್ಷಣವೂ ಯೋಚಿಸದೆ, ಹಿಂದೆಮುಂದೆ ನೋಡದೆ ಖಂಡಿತವಾಗಿಯೂ ಎಂದು ಉತ್ತರಿಸಿದ್ದಾರೆ.
2024ಕ್ಕೆ ಕಮಲಾ ಹ್ಯಾರಿಸ್ ತಮ್ಮ ಉತ್ತರಾಧಿಕಾರಿಯಾಗುತ್ತಾರೆ. ಆಕೆ ನಂಬರ್ 1 ಮತ್ತು ನಂಬರ್ 2 ಕೂಡ, ಅವರಿಗೆ ಮತ ಚಲಾಯಿಸುವ ಹಕ್ಕು ಇದೆ, ಉಪಾಧ್ಯಕ್ಷೆಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಅಮೆರಿಕದ ಇತಿಹಾಸದಲ್ಲಿ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷೆಯಾದ ಮೊದಲ ಕಪ್ಪು ಮಹಿಳೆಯಾಗಿದ್ದು ಮೊದಲ ಭಾರತೀಯ ಅಮೆರಿಕ ಮೂಲದ ಮಹಿಳೆ ಎಂಬ ಹೆಗ್ಗಳಿಕೆ ಕೂಡ ಇದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕೆಲೆಯ ಓಕ್ಲಾಂಡ್ ನಲ್ಲಿ ಜನಿಸಿದ ಕಮಲಾ ಹ್ಯಾರಿಸ್ ಅವರ ತಾಯಿಯ ತವರು ಭಾರತವಾದರೆ ತಂದೆ ಜಮೈಕಾದವರು.
ಕ್ಯಾಲಿಫೋರ್ನಿಯಾದ ಸೆನೆಟರ್ ಆಗಿ 2017ರಲ್ಲಿ ಆಯ್ಕೆಯಾದ ಕಮಲಾ ಹ್ಯಾರಿಸ್ ಮೊದಲ ದಕ್ಷಿಣ ಏಷ್ಯಾ-ಅಮೆರಿಕನ್ ಸೆನೆಟರ್ ಹಾಗೂ ಎರಡನೇ ಆಫ್ರಿಕನ್-ಅಮೆರಿಕನ್ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಉಪಾಧ್ಯಕ್ಷೆಯಾಗುವ ಮುನ್ನ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದವರು. ಹೋಮ್ ಲ್ಯಾಂಡ್ ಸೆಕ್ಯುರಿಟಿ ಮತ್ತು ಸರ್ಕಾರದ ವ್ಯವಹಾರ ಸಮಿತಿಯಲ್ಲಿ, ಗುಪ್ತಚರ ಆಯ್ಕೆ ಸಮಿತಿ, ಬಜೆಟ್ ಸಮಿತಿ, ನ್ಯಾಯಾಂಗ ಸಮಿತಿಗಳಲ್ಲಿ ಕೂಡ ಕೆಲಸ ಮಾಡಿ ಅನುಭವ ಹೊಂದಿದವರು.
2019ರ ಆಗಸ್ಟ್ ನಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೊ ಬೈಡನ್ ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದರು. ನಂತರ 2020ರ ನವೆಂಬರ್ ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಮೆರಿಕ ಅಧ್ಯಕ್ಷ-ಉಪಾಧ್ಯಕ್ಷೆಯಾದರು.