ಗುವಾಹತಿ: ಅರುಣಾಚಲ ಪ್ರದೇಶದ ಯುವಕ ಮಿರಾಮ್ ಟ್ಯಾರೋನ್ ಚೀನಾದ ವಶದಲ್ಲಿ 209 ಗಂಟೆಗಳ ಕಾಲ ಚಿತ್ರಹಿಂಸೆ ಅನುಭವಿಸಿದ್ದಾನೆ ಎಂದು ಆತನ ತಂದೆ ಸೋಮವಾರ ಹೇಳಿದ್ದಾರೆ.
ಚೀನಾ ಸೇನೆ ನನ್ನ ಮಗನ ಕೈಗಳನ್ನು ಕಟ್ಟಿ, ಕಣ್ಣುಮುಚ್ಚಿ, "ವಿದ್ಯುತ್ ಶಾಕ್" ನೀಡಿದೆ ಮತ್ತು ಬೆನ್ನಿಗೆ ಒದ್ದಿದ್ದಾರೆ. ಚಿತ್ರಹಿಂಸೆಯಿದಾಗಿ ಮಗ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆ ಎಂದು ತಂದೆ ಓಪಾಂಗ್ ಟ್ಯಾರೋನ್ ಅವರು ತಿಳಿಸಿದ್ದಾರೆ.
"ವಿವಾದಿತ ಗಡಿ ಪ್ರದೇಶದಲ್ಲಿ ನನ್ನ ಮಗನನ್ನು ಬಂಧಿಸಿದ ಚೀನಾ ಸೇನೆ, ಆತನ ಕಣ್ಣುಮುಚ್ಚಿ ಸೇನಾ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಬಳಿಕ ನನ್ನ ಮಗನಿಗೆ ಎಲ್ಲಾ ರೀತಿಯ ಚಿತ್ರಹಿಂಸೆ ನೀಡಿದ್ದಾರೆ ಎಂದು” ಒಪಾಂಗ್ ಅವರು ಹೇಳಿದ್ದಾರೆ.
ಜನವರಿ 27 ರಂದು ಅರುಣಾಚಲದ ಅಂಜಾವ್ ಜಿಲ್ಲೆಯ ಕಿಬಿತು ಪ್ರದೇಶದಲ್ಲಿ 17 ವರ್ಷದ ತನ್ನ ಮಗನನ್ನು ಭಾರತೀಯ ಸೇನೆಗೆ ಹಸ್ತಾಂತರಿಸುವವರೆಗೂ ಆತನ ಕೈಗಳನ್ನು ಕಟ್ಟಿ, ಕಣ್ಣುಮುಚ್ಚಲಾಗಿತ್ತು. ಊಟ ಮಾಡುವಾಗ ಅಥವಾ ಶೌಚಾಲಯಕ್ಕೆ ಹೋಗುವಾರ ಮಾತ್ರ ಚೀನಾ ಸೇನೆ ತನ್ನ ಮಗನ ಕೈಗಳನ್ನು ಬಿಚ್ಚಿದೆ ಎಂದು ತಂದೆ ಘಟನೆಯನ್ನು ವಿವರಿಸಿದ್ದಾರೆ.
ನನ್ನ ಮಗನನ್ನು ವಾಹನದಲ್ಲಿ ಕಿಬಿತುಗೆ ಕರೆದೊಯ್ಯಲಾಗಿದ್ದು, ಹಸ್ತಾಂತರದ ನಂತರ ಮೂರು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು ಎಂದು ತಂದೆ ಹೇಳಿದ್ದಾರೆ.