ಕಾಸರಗೋಡು: ರಾಜ್ಯ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿರುವ ಬೆದ್ರಡ್ಕದ ಭೆಲ್-ಇಎಂಎಲ್-ಕೆಲ್(ಕೇರಳ ಇಲೆಕ್ಟ್ರಿಕಲ್ಸ್ ಮೆಶಿನ್ಸ್ ಲಿಮಿಟೆಡ್)ಸಂಸ್ಥೆಯನ್ನು ಫೆಬ್ರವರಿ ತಿಂಗಳಲ್ಲಿ ಮತ್ತೆ ಚಟುವಟಿಕೆ ಆರಂಭಿಸಿ ಔದ್ಯೋಗಿಕ ಉದ್ಘಾಟನೆ ನಡೆಸುವುದಾಗಿ ಕೇರಳ ರಾಜ್ಯ ಕೈಗಾರಿಕೆ, ಕಾನೂನು ಹಾಗೂ ಹುರಿಹಗ್ಗ ಖಾತೆ ಸಚಿವ ಪಿ.ರಾಜೀವ್ ತಿಳಿಸಿದ್ದಾರೆ.
ಅವರು ಬೆದ್ರಡ್ಕದಲ್ಲಿರುವ ಸಂಸ್ಥೆಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ಸಂಸ್ಥೆ ಚಟುವಟಿಕೆಗಾಗಿ 20ಕೋಟಿ ರೂ. ಮೊತ್ತ ಮೀಸಲಿರಿಸಲಾಗಿದೆ. ಕೆಲವು ವರ್ಷಗಳಿಂದ ಚಟುವಟಿಕೆ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಯಂತ್ರೋಪಕರಣಗಳನ್ನು ಮತ್ತೆ ಸುಸ್ಥಿತಿಗೆ ತರಲಾಗಿದೆ. ಮೇಲ್ಛಾವಣಿ ದುರಸ್ತಿಗೊಳಿಸಲಾಗಿದ್ದು, ಕೆಲ್ ಕಂಪೆನಿಯನ್ನು ಆಧುನಿಕ ವ್ಯವಸ್ಥೆಯೊಂದಿಗೆ ಕಾರ್ಯಾರಂಭಗೊಳಿಸಲಾಗುವುದು. ಹೊಸ ಯಂತ್ರಗಳ ಖರೀದಿ ಪರಿಗಣನೆಯಲ್ಲಿ ಇಲ್ಲ ಎಂದು ತಿಳಿಸಿದರು. ಕೆಲ್‍ನ 4.5ಹೆಕ್ಟರ್ ಪ್ರದೇಶದಲ್ಲಿ ಕಿನ್‍ಫ್ರಾದ ಕೈಗಾರಿಕಾ ಎಸ್ಟೇಟ್ ಆರಂಭಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಕೆಲ್ ಸಂಸ್ಥೆಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಸಚಿವ ಪಿ.ರಾಜೀವ್ ಅವರು ಯಂತ್ರೋಪಕರಣಗಳನ್ನು ವೀಕ್ಷಿಸಿ, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಮಿಕರ ಜತೆ ಸಮಾಲೋಚನೆ ನಡೆಸಿದರು. ಸಂಸ್ಥೆ ನವೀಕರಣ ಹಾಗೂ ವೇತನ ಬಾಕಿ ವಿತರಣೆ ನಿಟ್ಟಿನಲ್ಲಿ 20ಕೋಟಿ ಮೊತ್ತದ ಅನುಮತಿ ಪತ್ರವನ್ನು ಕೈಗಾರಿಕಾ ಇಲಾಖೆ ಎಂ.ಡಿ ಮಹಮ್ಮದ್ ಹನೀಶ್ ಅವರಿಗೆ ಹಸ್ತಾಂತರಿಸಿದರು. ಶಾಸಕರಾದ ಎನ್.ಎ ನೆಲ್ಲಿಕುನ್ನು, ಸಿ.ಎಚ್ ಕುಞಂಬು, ಮಾಜಿ ಸಂಸದ ಪಿ.ಕರುಣಾಕರನ್, ವಿವಿಧ ಕಾರ್ಮಿಕ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.
ಆಸ್ಟ್ರಲ್ ವಾಚ್ ಪುನರಾರಂಭ:
ಕಾಸರಗೋಡು ನೆಲ್ಲಿಕುಂಜೆಯಲ್ಲಿ ದೀರ್ಘ ಕಾಲದಿಂದ ಮುಚ್ಚುಗಡೆಗೊಂಡಿರುವ ಸರ್ಕಾರಿ ಸ್ವಾಮ್ಯದ ಆಸ್ಟ್ರಲ್ ವಾಚ್ ಕಂಪೆನಿಗೆ ಸಚಿವ ಪಿ.ರಾಜೀವ್ ಭೇಟಿ ನೀಡಿದರು. ಸಂಸ್ಥೆಯನ್ನು ಮತ್ತೆ ಕಾರ್ಯಾಚರಿಸುವಂತೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿರುವುದಾಗಿ ತಿಳಿಸಿದರು. ಶಾಸಕರಾದ ಎನ್.ಎ ನೆಲ್ಲಿಕುನ್ನು, ಸಿ.ಎಚ್ ಕುಞಂಬು, ನಗರಸಭಾ ಅಧ್ಯಕ್ಷ ವಿ.ಎಂ ಮುನೀರ್, ನಗರಸಭಾ ಸದಸ್ಯೆ ವೀಣಾಅರುಣ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.