ಭಾರತದಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜನವರಿ 25ರಂದು 'ರಾಷ್ಟ್ರೀಯ ಮತದಾರರ ದಿನ' ಆಚರಿಸಲಾಗುತ್ತಿದೆ.
ದೇಶದ ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಸದೃಢಗೊಳಿಸಲು ಮತ್ತು ಮತದಾರರು ಹೆಚ್ಚು ಪಾಲ್ಗೊಳ್ಳುವಂತೆ ಮಾಡಲು ಚುನಾವಣಾ ಆಯೋಗ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ.
1950ರ ಜನವರಿ 25ರಂದು ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜನವರಿ 25ರಂದು 'ರಾಷ್ಟ್ರೀಯ ಮತದಾರರ ದಿನ' ಆಚರಿಸಲಾಗುತ್ತಿದೆ. ಮೊದಲ ಬಾರಿ 2011ರಲ್ಲಿ ಆಚರಿಸಲಾಗಿತ್ತು. ಬಳಿಕ ಪ್ರತಿ ವರ್ಷ ಆಚರಿಸುತ್ತಾ ಬರಲಾಗಿದೆ.
ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ದಿನಾಚರಣೆಯ ಪ್ರಮುಖ ಉದ್ದೇಶ. ಭಾಷಣ ಸ್ಪರ್ಧೆ, ಮತದಾನ ಜಾಗೃತಿ ಅಭಿಯಾನ, ಮತದಾರರ ಗುರುತಿನ ಚೀಟಿ ವಿತರಣೆ, ಛಾಯಾಚಿತ್ರ ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
18 ವರ್ಷ ವಯಸ್ಸು ಪೂರ್ಣಗೊಂಡವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಚುನಾವಣಾ ಆಯೋಗ, ಮತದಾರರ ಗುರುತಿನ ಚೀಟಿ ನೀಡುತ್ತದೆ. ರಾಷ್ಟ್ರೀಯ ಮತದಾರರ ದಿನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಸೆಲೆಬ್ರಿಟಿಗಳು ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.