ತಿರುವನಂತಪುರ; ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ತಿಳಿದು ಬಂದಿದೆ. ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ಆರೋಗ್ಯ ಸ್ಥಿತಿಯನ್ನು ವಿವರಿಸಿದರು. ಆರೋಗ್ಯ ಸ್ಥಿತಿ ತೃಪ್ತಿಕರವಾಗಿದ್ದು, ಚಿಕಿತ್ಸೆಯು ಉತ್ತಮವಾಗಿ ಸಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ. ಅವರಿರುವ ಪ್ರದೇಶದ ಹವಾಮಾನ -9 ಡಿಗ್ರಿ. ಆದರೆ, ಆಸ್ಪತ್ರೆ ಮೇಲೆ ಪರಿಣಾಮ ಬೀರಿಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿ ವಿದೇಶದಿಂದ ಸಚಿವ ಸಂಪುಟ ಸಭೆ ಮುನ್ನಡೆಸಿರುವುದು ಇದೇ ಮೊದಲು. ವಿದೇಶದಲ್ಲಿದ್ದರೂ ಮುಖ್ಯಮಂತ್ರಿ ಜವಾಬ್ದಾರಿ ಯಾರಿಗೂ ಹಸ್ತಾಂತರಿಸಿರಲಿಲ್ಲ. ಸದ್ಯ ಸಿಎಂಗೆ ಅಮೆರಿಕದ ಮಿನ್ನೇಸೋಟದಲ್ಲಿರುವ ಮೇಯೊ ಕ್ಲಿನಿಕ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜನವರಿ 15ರಂದು ಮುಖ್ಯಮಂತ್ರಿಗಳು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. 29 ರಂದು ವಾಪಸಾಗುವ ನಿರೀಕ್ಷೆ ಇದೆ. ಅವರು ಪತ್ನಿ ಕಮಲಾ ಜೊತೆಗಿದ್ದಾರೆ.
ಮುಖ್ಯಮಂತ್ರಿಗಳ ಚಿಕಿತ್ಸೆಗೆ ಸರ್ಕಾರ ವೆಚ್ಚ ಭರಿಸುತ್ತಿದೆ. ಇದಕ್ಕೂ ಮುನ್ನ 2018ರ ಸೆಪ್ಟೆಂಬರ್‍ನಲ್ಲಿ ಮುಖ್ಯಮಂತ್ರಿಗಳು ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದರು. ಆಗಲೂ ಮುಖ್ಯಮಂತ್ರಿ ಅಧಿಕಾರವನ್ನು ಬೇರೆಯವರಿಗೆ ವಹಿಸದೆ ಇ-ಫೈಲಿಂಗ್ ಮೂಲಕ ಆಡಳಿತ ನಿರ್ವಹಿಸಿದ್ದರು.