ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೋಲ್ಕತ್ತದಲ್ಲಿ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (ಸಿಎನ್‌ಸಿಐ) ಎರಡನೇ ಕ್ಯಾಂಪನ್ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಹಾಜರಿದ್ದರು.
ದೇಶದ ಎಲ್ಲ ಭಾಗಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವ ಹಾಗೂ ನವೀಕರಿಸುವ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಭಾಗವಾಗಿ ಸಿಎನ್‌ಸಿಐನ ಎರಡನೇ ಕ್ಯಾಂಪಸ್ ತೆರೆಯಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ತಿಳಿಸಿದೆ.
ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎನ್‌ಸಿಐಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಸೌಲಭ್ಯವನ್ನು ಹೆಚ್ಚಿಸುವುದು ಅಗತ್ಯವೆನಿಸಿತ್ತು.
ಸುಮಾರು ₹530 ಕೋಟಿ ವೆಚ್ಚದಲ್ಲಿ ಸಿಎನ್‌ಸಿಐ ಕ್ಯಾಂಪಸ್ ನಿರ್ಮಿಸಲಾಗಿದೆ. ಈ ಪೈಕಿ ₹400 ಕೋಟಿ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಉಳಿದ ಮೊತ್ತವನ್ನು 75:25ರ ಅನುಪಾತದಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಭರಿಸಿದೆ.
460 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ನ್ಯೂಕ್ಲಿಯರ್ ಮೆಡಿಸಿನ್ (ಪಿಇಟಿ), ಟೆಸ್ಲಾ ಎಂಆರ್‌ಐ, 128 ಸ್ಲೈಸ್ ಸಿಟಿ ಸ್ಕ್ಯಾನರ್, ರೆಡಿಯೊನ್ಯೂಕ್ಲಿಡ್ ಥೆರಪಿ ಯುನಿಟ್, ಎಂಡೋಸ್ಕೋಪಿ ಸ್ಯೂಟ್, ಆಧುನಿಕ ಬ್ರಾಕಿಥೆರಪಿ ಯುನಿಟ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿದೆ.
ಸುಧಾರಿತ ಕ್ಯಾನ್ಸರ್ ಸಂಶೋಧನಾ ಕೇಂದ್ರವಾಗಿಯೂ ಇದು ಕಾರ್ಯ ನಿರ್ವಹಿಸಲಿದೆ.