ಕೇಪ್ ಟೌನ್: ಪ್ರವಾಸಿ ಟೀಂ ಇಂಡಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್ ಗಳಿಂದ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಕೇಪ್ ಟೌನ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 223 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ 210 ರನ್ ಗಳಿಗೆ ಆಲೌಟ್ ಆಗಿತ್ತು. 13 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 198 ರನ್ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು.
ಟೀಂ ಇಂಡಿಯಾ ನೀಡಿದ 212 ರನ್ ಗಳ ಗುರಿ ಬೆನ್ನಟ್ಟಿದ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 212 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಆಫ್ರಿಕಾ ಪರ ಮಾರಕ್ರಾಮ್ 16, ಎಲ್ಗರ್ 30, ಪೀಟರ್ ಸನ್ 82, ದುಸೇನ್ ಅಜೇಯ 41 ಹಾಗೂ ಬವುಮಾ ಅಜೇಯ 32 ರನ್ ಬಾರಿಸಿದ್ದಾರೆ.
ಟೀಂ ಇಂಡಿಯಾ ಒಟ್ಟು 7 ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು 6 ಬಾರಿ ಸರಣಿ ಸೋಲು ಕಂಡಿತ್ತು. ಇನ್ನು 2010011ರಲ್ಲಿ ಧೋನಿ ನೇತೃತ್ವದಲ್ಲಿ ಮೊದಲ ಬಾರಿಗೆ ಸರಣಿ ಡ್ರಾ ಸಾಧಿಸಿತ್ತು. ಒಟ್ಟು 20 ಟೆಸ್ಟ್ ಪಂದ್ಯಗಳನ್ನಾಡಿದ್ದು, ಭಾರತ 3 ಪಂದ್ಯ ಗೆದ್ದಿದ್ದರೆ, ಆಫ್ರಿಕಾ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಉಳಿದ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದೆ.
ಇದೀಗ ನಡೆದ 8ನೇ ಸರಣಿಯಲ್ಲಿ ಭಾರತ 1 ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಉಳಿದ ಎರಡು ಪಂದ್ಯಗಳಲ್ಲಿ ಸೋತು ಕಂಡಿದೆ.