ಮುಂಬೈ: ಮಹಾಮಾರಿ ಕೊರೋನಾ ವೈರಸ್ ಹೊಸ ವರ್ಷದ ಆರಂಭದಲ್ಲಿ ಜನತೆಗೆ ಶಾಕ್ ನೀಡಿದ್ದು, ಮೂರನೇ ಅಲೆಯಲ್ಲಿ ರಾಜ್ಯದಲ್ಲಿ 80 ಲಕ್ಷ ಕೋವಿಡ್ ಪಾಸಿಟಿವ್ ಪ್ರಕರಣಗಳು ಮತ್ತು 80 ಸಾವಿರ ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ ನೀಡಿದೆ.
"ಮೂರನೇ ಅಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತುಂಬಾ ದೊಡ್ಡದಾಗಿದೆ" ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ)ಡಾ. ಪ್ರದೀಪ್ ವ್ಯಾಸ್ ಅವರು ಶುಕ್ರವಾರ ತಡರಾತ್ರಿ ಎಲ್ಲಾ ಉನ್ನತ ಸರ್ಕಾರಿ ಮತ್ತು ಆರೋಗ್ಯ ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದಾರೆ.
"ಮೂರನೇ ಅಲೆಯಲ್ಲಿ ಸುಮಾರು 80 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ. ಇದರಲ್ಲಿ ಶೇಕಡಾ 1 ರಷ್ಟು ಸಾವು ಸಂಭವಿಸಿದರೂ, ನಾವು 80,000 ಸಾವುಗಳನ್ನು ನೋಡಬಹುದು" ಎಂದು ಡಾ ವ್ಯಾಸ್ ಎಚ್ಚರಿಸಿದ್ದಾರೆ.
ಮೂರನೇ ಅಲೆಗೆ ಕಾರಣವಾಗುತ್ತಿರುವ ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ಸೌಮ್ಯವಾಗಿದೆ ಮತ್ತು ಮಾರಣಾಂತಿಕವಲ್ಲ ಎಂಬ ವಿಶ್ಲೆಷಣೆಗಳನ್ನು ಪರಿಗಣಿಸಿ ನಿರ್ಲಕ್ಷ್ಯ ಮಾಡುವುದು ಬೇಡ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
"ಲಸಿಕೆ ಹಾಕಿಸಿಕೊಂಡವರಿಗೆ ಮತ್ತು ರೋಗನಿರೋಧಕ ಶಕ್ತಿ ಹೊಂದಿರುವವರಿಗೂ ಇದು ಸಮಾನವಾಗಿ ಮಾರಕವಾಗಿದೆ. ಆದ್ದರಿಂದ ದಯವಿಟ್ಟು ಲಸಿಕೆ ವ್ಯಾಪ್ತಿಯನ್ನು ಸುಧಾರಿಸಿ ಮತ್ತು ಜೀವಗಳನ್ನು ಉಳಿಸಿ" ಎಂದು ಡಾ ವ್ಯಾಸ್ ಮನವಿ ಮಾಡಿದ್ದಾರೆ.