ಕಾಸರಗೋಡು: ಬದಿಯಡ್ಕ ಪಂಚಾಯಿತಿಯ ಉಕ್ಕಿನಡ್ಕದ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗ ಆರಂಭಿಒಸಲು ಸರ್ಕಾರ ಕೊನೆಗೂ ತೀರ್ಮಾನಿಸಿದೆ. ಜ. 3ರಂದು ಓಪಿ ವಿಭಾಗ ಆರಂಭಗೊಳ್ಳಲಿರುವುದಾಗಿ ಆರೋಗ್ಯ ಖಾತೆ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಅಕಾಡಮಿಕ್ ಬ್ಲಾಕ್‍ನಲ್ಲಿ ಓಪಿ ವಿಭಾಗ ಕಾರ್ಯಾರಂಭಗೊಳ್ಳಲಿದೆ. ಕಟ್ಟಡ ಕಾಮಗಾರಿ ಪೂರ್ತಿಗೊಳ್ಳುವುದಕ್ಕೂ ಮುಂಚಿತವಾಗಿ ಅಕಾಡಮಿಕ್ ವಿಭಾಗದಲ್ಲಿ ಓಪಿ ವಿಭಾಗವನ್ನು ಆರಂಭಿಸಲಾಗುತ್ತಿದೆ. ಮೆಡಿಕಲ್, ಪೀಡಿಯಾಟ್ರಿಕ್ ಓಪಿಗಳು ಮೊದಲ ಹಂತದಲ್ಲಿ ಆರಂಭಗೊಳ್ಳಳಿದೆ. ನ್ಯೂರಾಲಜಿ. ನುಮೇಟಾಲಜಿ, ನೆಫ್ರಾಲಜಿ ವಿಭಾಗದ ವಿಶೇಷ ವೈದ್ಯರ ಸೇವೆಯೂ ಲಭ್ಯವಿರಲಿದೆ. ಸರ್ಜರಿ, ಇಎನ್‍ಟಿ, ಒಫ್ತಾಲ್ಮೋಲಜಿ, ಡೆಂಟಲ್ ಓಪಿ ವಿಭಾಗವೂ ಕಾರ್ಯಾಚರಿಸಲಿದೆ. ಓಪಿ ವಿಭಾಗ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಕೆಲವು ದಿವಸಗಳ ಹಿಂದೆಯೇ ನ್ಯೂರಾಲಜಿಸ್ಟ್ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ನ್ಯೂರಾಲಜಿಸ್ಟ್ ನೇಮಿಸಿರುವ ಬಗ್ಗೆ ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾಜಾರ್ಜ್ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಸರ್ಕಾರಿ ಆಸ್ಪತ್ರೆ ವಲಯದಲ್ಲಿ ಇದೇ ಮೊದಲಬಾರಿಗೆ ನ್ಯೂರಾಲಜಿಸ್ಟ್ ನೇಮಿಸಲಾಗುತ್ತಿದೆ. ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಎದುರಿಸುತ್ತಿರುವ ನ್ಯೂರಾಲಜಿಕಲ್ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು, ಭವಿಷ್ಯದಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಅವರಿಗೆ ನೀಡಬಹುದಾದ ಚಿಕಿತ್ಸೆಗಳಿಗೆ ಹೆಚ್ಚಿನ ಸವಲತ್ತು ಒದಗಿಸಲು ಇದರಿಂದ ಸಾಧ್ಯವಾಗಲಿರುವುದಾಗಿ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.