ಕಾಸರಗೋಡು: ಜಿಲ್ಲೆಯ ಎಲ್ಲ ಗ್ರಾಮಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಜ. 30ರಿಂದ ಡಿಜಿಟಲ್ ಸರ್ವೇ ಕಾರ್ಯ ಆರಂಭಗೊಳ್ಳಲಿದೆ. ಕಾಸರಗೋಡು ತಾಲೂಕು ಮುಟ್ಟತ್ತೋಡಿ ಗ್ರಾಮದ 500ಹೆಕ್ಟರ್ ಪ್ರದೇಶದಲ್ಲಿ ಡ್ರೋಣ್ ಸರ್ವೇ ನಡೆಸುವ ಮೂಲಕ ಗ್ರಾಮದಲ್ಲಿ ಡಜಿಟಲ್ ಸರ್ವೇ ಉದ್ಘಾಟಿಸಲಾಗುವುದು. ಮೊದಲ ಹಂತದಲ್ಲಿ 18ಗ್ರಾಮಗಳಲ್ಲಿ ಡಿಜಿಟಲ್ ಸರ್ವೇ ಆರಂಭಿಸಲಾಗುವುದು. ಡ್ರೋಣ್ ಜತೆಗೆ ಕೋರ್ಡ್, ಇ.ಟಿ.ಎಸ್ ವ್ಯವಸ್ಥೆಯ ಮೂಲಕವೂ ಸರ್ವೇ ನಡೆಸಲಾಗುವುದು.
ಡಿಜಿಟಲ್ ಸರ್ವೇ ನಡೆಸಿ, ದಾಖಲೆ ಲಭ್ಯವಾಗುವ ಮೂಲಕ ಪ್ರಸಕ್ತ ಇರುವ ಸರ್ವೇ ನಂಬರ್, ಸಬ್ ಡಿವಿಶನ್ ನಂಬರ್, ತಂಡಪ್ಪೇರ್ ನಂಬರ್ ಇಲ್ಲವಾಗಲಿದೆ. ಇದರ ಬದಲಾಗಿ ಅವರ ಭೂಮಿಗೆ ಪ್ರಸಕ್ತ ಜಾರಿಯಲ್ಲಿರುವ ಕಾನೂನಿನನ್ವಯ ಹೊಸ ನಂಬರ್ ಲಭ್ಯವಾಗಲಿದೆ. ಸೂಕ್ತ ರೀತಿಯಲ್ಲಿ ಯೋಜನೆಯ ಪ್ರಯೋಜನ ಪಡೆದುಕೊಂಡಲ್ಲಿ, ರೆವೆನ್ಯೂ ರಿಜಿಸ್ಟ್ರೇಶನ್, ಪಂಚಾಯಿತಿ, ಬ್ಯಾಂಕ್ ಮುಂತಾದ ಸೇವೆಗಳು ಕಾಲವಿಳಂಬವಿಲ್ಲದೆ ಲಭ್ಯವಾಗಲಿದೆ.
ಭೂಮಿಯ ಡಿಜಿಟಲ್ ಸರ್ವೇ ನಡೆಸುವ ಹಿನ್ನೆಲೆಯಲ್ಲಿ ಒಂದು ಪ್ರದೇಶದ ಎಲ್ಲ ಭೂಮಿಯನ್ನೂ ಡ್ರೋಣ್ ಸರ್ವೇಗೆ ಒಳಪಡಿಸಬೇಕಾಗುತ್ತದೆ. ಇದಕ್ಕಾಗಿ ಭೂಮಾಲಿಕರು ಜಾಗದ ಗಡಿ ಪ್ರದೇಶದಲ್ಲಿ ಡ್ರೋಣ್ ಸರ್ವೇಗೆ ಸಹಾಯವಾಗುವ ರೀತಿಯಲ್ಲಿ ಗುರುತು ಮಾಡಿಕೊಳ್ಳಬೇಕಾಗಿದೆ. ಡ್ರೋಣ್ ಸಂಚಾರಕ್ಕೆ ಸಹಾಯವಾಗುವ ರೀತಿಯಲ್ಲಿ ಗಡಿಯ ವಾಯುಮಾರ್ಗದಲ್ಲಿರುವ ಮರದ ರೆಂಬೆಗಳನ್ನು ಕಡಿದು, ಇಟ್ಟಿಗೆ, ಸಿಮೆಂಟ್, ಕೆಂಪುಕಲ್ಲಿನ ಗೋಡೆಗಳನ್ನು ಕಟ್ಟಿದ್ದರೆ, ಇವುಗಳಿಗೆ ಬಣ್ಣಬಳಿದು ಗುರುತು ಪತ್ತೆಹಚ್ಚಲು ಸಹಾಐವಾಗುವ ರೀತಿಯಲ್ಲಿರುಸುವಂತೆ ಪ್ರಕಟಣೆ ತಿಳಿಸಿದೆ.