ನವದೆಹಲಿ: 2021-22ರ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ 35,000ಕ್ಕೂ ಹೆಚ್ಚು ರೈಲುಗಳನ್ನು ನಿರ್ವಹಣಾ ಕಾರ್ಯದ ಕಾರಣದಿಂದ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಆರ್‌ಟಿಐ (ಮಾಹಿತಿ ಹಕ್ಕು) ಅಡಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರವಾಗಿ ಭಾರತೀಯ ರೈಲ್ವೆ ಸಚಿವಾಲಯ ಈ ಮಾಹಿತಿಯನ್ನು ನೀಡಿದೆ. 2021-22ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಮೆಂಟೇನನ್ಸ್ ಕಾರಣಗಳಿಂದಾಗಿ 20,941 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಅದೇ ಸಮಯದಲ್ಲಿ ಈ ಸಂಖ್ಯೆಯು ಎರಡನೇ ತ್ರೈಮಾಸಿಕದಲ್ಲಿ 7,117 ಮತ್ತು ಮೂರನೇ ತ್ರೈಮಾಸಿಕದಲ್ಲಿ 6,869 ಆಗಿತ್ತು. ಮಧ್ಯಪ್ರದೇಶದ ಚಂದ್ರಶೇಖರ್ ಗೌರ್ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ರೈಲ್ವೆ ಇಲಾಖೆ ಬಳಿ ಈ ಮಾಹಿತಿ ಕೇಳಿದ್ದರು. ಇತ್ತೀಚಿನ ರೈಲು ಇತಿಹಾಸದಲ್ಲಿ ರದ್ದುಗೊಂಡ ರೈಲುಗಳ ಸಂಖ್ಯೆ 2019ರಲ್ಲಿ ಅತಿ ಹೆಚ್ಚು ಅಂದರೆ ಸುಮಾರು 3146 ರೈಲುಗಳನ್ನು ರದ್ದುಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, 2014 ರಲ್ಲಿ ಮೆಂಟೇನನ್ಸ್ ವರ್ಕ್ಸ್ ನಿಂದಾಗಿ 101 ರೈಲುಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, 2017ರಲ್ಲಿ 829, 2018ರಲ್ಲಿ 2867 ಮತ್ತು 2019ರಲ್ಲಿ 3146 ರೈಲುಗಳ ಸಂಚಾರ ರದ್ದಾಗಿತ್ತು. ಈ ಅಂಕಿ-ಅಂಶಗಳು ಹಾಳಾದ ಟ್ರ್ಯಾಕ್‌ನಲ್ಲಿ ಇನ್ನೂ ಎಷ್ಟು ಕೆಲಸ ಆಗಬೇಕಾಗಿದೆ ಎಂಬುದನ್ನು ತೋರಿಸಿಕೊಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
40 ಸಾವಿರಕ್ಕೂ ಹೆಚ್ಚು ರೈಲುಗಳು ವಿಳಂಬ ಇನ್ನು ಈ ಅವಧಿಯಲ್ಲಿ 40 ಸಾವಿರಕ್ಕೂ ಹೆಚ್ಚು ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಬಂದಿರುವುದು ಆರ್‌ಟಿಐನಲ್ಲಿ ಗಮನಕ್ಕೆ ಬಂದಿದೆ. ಆದಾಗ್ಯೂ, ಕಳೆದ ವರ್ಷ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ನಿರ್ವಹಣಾ ಕಾರಣಗಳಿಂದ ಸುಮಾರು 35,026 ರೈಲುಗಳನ್ನು ರದ್ದುಗೊಳಿಸಿದಾಗ ಎಷ್ಟು ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂಬುದು ಸ್ಪಷ್ಟವಾಗಿಲ್ಲ. 2020ರ ಬಹುಪಾಲು ಅವಧಿಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ರೈಲ್ವೆ ತನ್ನ ಜನರಲ್ ಪ್ರಯಾಣದ ಸೇವೆಗಳನ್ನು ರದ್ದುಗೊಳಿಸಿತ್ತು. ಇದರ ಬದಲಾಗಿ ವಿಶೇಷ ರೈಲುಗಳನ್ನು ಮಾತ್ರ ಓಡಿಸಿತ್ತು.