ನವದೆಹಲಿ: ಜನವರಿ 1ರಿಂದ ಮಕ್ಕಳಿಗೆ ಕರೊನಾ ಲಸಿಕೆ ನೋಂದಣಿಯನ್ನು ಆರಂಭಿಸಲಾಗಿದೆ. ಸದ್ಯ 15ರಿಂದ 18 ವರ್ಷ ಒಳಗಿನ ಮಕ್ಕಳಿಗೆ ಈ ಲಸಿಕೆ ಹಾಕಲಾಗುವುದು. ಇದಾಗಲೇ ಹಲವು ಶಾಲಾ- ಕಾಲೇಜುಗಳ ವತಿಯಿಂದ ಪಾಲಕರಿಗೆ ಸೂಚನೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಇದೇ 25 ರಂದು ಘೋಷಿಸಿದ್ದರು.
ಮಕ್ಕಳಿಗೆ ಲಸಿಕೆ ಕುರಿತಂತೆ ವೇಳಾಪಟ್ಟಿಯನ್ನು ಮುಂದಿನ ಕೆಲವು ದಿನಗಳಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳೊಂದಿಗೆ ಸರ್ಕಾರ ಹಂಚಿಕೊಳ್ಳಲಿದೆ. ಸದ್ಯ ಕೋ-ವಿನ್ ವೆಬ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು, ಇಲ್ಲದೇ ಹೋದರೆ ಜನವರಿ 3 ರಿಂದ ವ್ಯಾಕ್ಸಿನೇಷನ್ ಪ್ರಾರಂಭವಾದಾಗ ವಾಕ್-ಇನ್ ನೋಂದಣಿ ಸಹ ಮಾಡಿಕೊಳ್ಳಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಡೋಸ್ ಮಕ್ಕಳಿಗೆ ನೀಡಲು ಅರ್ಹತೆ ಹೊಂದಿದ್ದು ಅದನ್ನು ನೀಡಲಾಗುವುದು.
ಇದರ ಜತೆಗೆ ಜನವರಿ 10 ರಿಂದ ಮೂರನೇ ಡೋಸ್ ಲಸಿಕೆ ನೀಡುವ ಕೆಲಸವೂ ಆರಂಭವಾಗಲಿದೆ. 1 5-18 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಸಂದರ್ಭದಲ್ಲಿ ಮೂರನೇ ಡೋಸ್ ಆಗಿ 'ಕೋವಾಕ್ಸಿನ್' ಮಾತ್ರ ನೀಡಲಾಗುವುದು ಮತ್ತು 'ಕೋವಾಕ್ಸಿನ್' ನ ಹೆಚ್ಚುವರಿ ಪ್ರಮಾಣವನ್ನು ಎಲ್ಲಾ ರಾಜ್ಯಗಳಿಗೆ ಕಳುಹಿಸಲಾಗುವುದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಇದರ ಬಗ್ಗೆ ಇನ್ನಷ್ಟು ಸ್ಪಷ್ಟ ಚಿತ್ರಣವನ್ನು ಶೀಘ್ರದಲ್ಲಿ ಆರೋಗ್ಯ ಇಲಾಖೆ ನೀಡಲಿದೆ.
ನಾನಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವ್ಯಕ್ತಿಗಳು ಮುಂಜಾಗ್ರತಾ ಲಸಿಕೆ ಪಡೆಯಲು, ವೈದ್ಯರಿಂದ ಪ್ರಮಾಣಪತ್ರ ಪತ್ರ ತರುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಇದಾಗಲೇ ಸ್ಪಷ್ಟಪಡಿಸಿದೆ. ಈ ಮೂಲಕ ವಯೋವೃದ್ಧರ ಪ್ರಮಾಣಪತ್ರಕ್ಕಾಗಿ ಆಸ್ಪತ್ರೆಗಳಿಗೆ ಅಲೆಯುವ ಕೆಲಸವನ್ನು ತಪ್ಪಿಸಿದೆ. ಆದರೆ ಮುಂಜಾಗ್ರತಾ ಲಸಿಕೆ ಪಡೆಯುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ಹೇಳಿದೆ.