ನವದೆಹಲಿ: ಭಾರತದ ಪ್ರಮುಖ ನಗರಗಳಲ್ಲಿ ಕೊರೋನಾ ವೈರಸ್ ಹೊಸ ಪ್ರಕರಣಗಳು ಶೇ. 50 ರಷ್ಟು ಹೆಚ್ಚಾಗಲು ಹೊಸ ರೂಪಾಂತರಿ ಓಮಿಕ್ರಾನ್ ಕಾರಣವಾಗಿದೆ ಮತ್ತು ಕಳೆದ ಒಂದು ವಾರದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯು ಮೂರನೇ ಅಲೆಯನ್ನು ಸೂಚಿಸುತ್ತದೆ ಎಂದು ಎನ್‌ಟಿಎಜಿಐನ ಕೋವಿಡ್ ವರ್ಕಿಂಗ್ ಗ್ರೂಪ್ ಅಧ್ಯಕ್ಷ ಡಾ ಎನ್‌ಕೆ ಅರೋರಾ ಅವರು ಮಂಗಳವಾರ ಹೇಳಿದ್ದಾರೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ದೇಶದ ಪ್ರಮುಖ ಮೆಟ್ರೋ ನಗರಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೋನಾ ವೈರಸ್‌ನ ಹೊಸ ರೂಪಾಂತರವು ಹೊಸ ಪ್ರಕರಣಗಳು ಶೇಕಡಾ 50 ಕ್ಕಿಂತ ಹೆಚ್ಚಾಗಲು ಕಾರಣವಾಗಿದೆ ಎಂದು ಅರೋರಾ ಹೇಳಿದ್ದಾರೆ.
“ಕಳೆದ ಒಂದು ವಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳವು ಮೂರನೇ ಅಲೆಯ ಸೂಚನೆಯಾಗಿದೆ. ಪ್ರಪಂಚದಾದ್ಯಂತ ಹಲವಾರು ಇತರ ದೇಶಗಳಲ್ಲೂ ಕೊರೋನಾ ಹೆಚ್ಚಳಕ್ಕೆ ಓಮಿಕ್ರಾನ್ ಕಾರಣವಾಗಿದೆ. ಆದರೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ.
ದೇಶದ ಶೇ. 80ಕ್ಕೂ ಹೆಚ್ಚು ಜನರು ಸಹಜವಾಗಿಯೇ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಶೇ. 90 ಕ್ಕೂ ಹೆಚ್ಚು ವಯಸ್ಕರು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ ಮತ್ತು ಶೇ. 65 ಕ್ಕೂ ಹೆಚ್ಚು ಜನರು ಸಂಪೂರ್ಣವಾಗಿ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಅರೋರಾ ವಿವರಿಸಿದ್ದಾರೆ.
"ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಅಲೆಯನ್ನು ನಾವು ಗಮನಿಸಿದರೆ, ಅದು ಅತ್ಯಂತ ವೇಗವಾಗಿ ಹೆಚ್ಚಾಯಿತು ಮತ್ತು ಎರಡು ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸಿತು. ಹೆಚ್ಚಿನ ಪ್ರಕರಣಗಳು ಲಕ್ಷಣರಹಿತವಾಗಿವೆ ಅಥವಾ ಸೌಮ್ಯವಾದ ಅನಾರೋಗ್ಯವನ್ನು ಹೊಂದಿದ್ದವು. ಈ ಎಲ್ಲಾ ಅಂಶಗಳು ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಅಲೆಯು ಶೀಘ್ರದಲ್ಲೇ ಕಡಿಮೆಯಾಗಬಹುದು ಎಂದು ಸೂಚಿಸುತ್ತವೆ." ಎಂದು ಅವರು ಹೇಳಿದ್ದಾರೆ.