ನವದೆಹಲಿ: ಭಾರತದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಮೊದಲ ಶ್ರೇಣಿ ಕಾರ್ಮಿಕರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ನೀಡುವ ಕೊವಿಡ್-19 ಮುನ್ನೆಚ್ಚರಿಕೆ ಡೋಸ್ ಭಿನ್ನವಾಗಿರಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯನ್ನು ನಿಯಂತ್ರಿಸುವ ಉದ್ದೇಶದಿಂದ ವೈದ್ಯಕೀಯ ಸಿಬ್ಬಂದಿ ಹಾಗೂ ಮೊದಲ ಶ್ರೇಣಿ ಕಾರ್ಮಿಕರಿಗೆ ಜನವರಿ 10ರಿಂದ ಮುನ್ನೆಚ್ಚರಿಕೆ ಡೋಸ್ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಮೊದಲು ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಬೇರೆ ಕೊವಿಡ್-19 ಲಸಿಕೆಯನ್ನು ನೀಡುವಂತಿಲ್ಲ, ಬದಲಿಗೆ ಕೊವಿಶೀಲ್ಡ್ ಲಸಿಕೆಯನ್ನೇ ನೀಡಬೇಕು. ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದವರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನೇ ನೀಡಬೇಕು. ಇಲ್ಲಿ ಯಾವುದೇ ರೀತಿ ಲಸಿಕೆಗಳ ಮಿಶ್ರಣ ಹಾಗೂ ಹೊಂದಾಣಿಕೆಗೆ ಅನುಮತಿ ಇರುವುದಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.ಯಾವುದು ಮುನ್ನೆಚ್ಚರಿಕೆ ಲಸಿಕೆ ಆಗಿರಬೇಕು?:
ಯಾವುದೇ ವ್ಯಕ್ತಿಯು ಮೊದಲು ಪಡೆದುಕೊಂಡ ಎರಡು ಕೊವಿಡ್-19 ಲಸಿಕೆಯನ್ನೇ ಮೂರನೇ ಬಾರಿ ಮುನ್ನೆಚ್ಚರಿಕೆ ಲಸಿಕೆಯನ್ನಾಗಿ ನೀಡಬೇಕು. ಮೊದಲ ಎರಡು ಡೋಸ್ ಕೊವ್ಯಾಕ್ಸಿನ್ ಪಡೆದವರಿಗೆ ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಪಡೆದವರಿಗೆ ಕೊವಿಶೀಲ್ಡ್ ಲಸಿಕೆಯನ್ನೇ ನೀಡಬೇಕು, ಎಂದು ನೀತಿ ಆಯೋಗದ ಸದಸ್ಯ ವಿ ಕೆ ಪಾಲ್ ಹೇಳಿದ್ದಾರೆ.
ಪ್ರಧಾನಿಯಿಂದ ಮುನ್ನೆಚ್ಚರಿಕೆ ಡೋಸ್ ಬಗ್ಗೆ ಘೋಷಣೆ:
ಪ್ರಧಾನಿಯಿಂದ ಮುನ್ನೆಚ್ಚರಿಕೆ ಡೋಸ್ ಬಗ್ಗೆ ಘೋಷಣೆ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಹೊಸ ರೂಪಂತರ ತಳಿ ಓಮಿಕ್ರಾನ್ ಕಾರಣವಾಗುತ್ತದೆ ಎಂಬ ಆತಂಕದ ನಡುವೆ ಮುನ್ನೆಚ್ಚರಿಕೆ ಡೋಸ್ ವಿತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕಳೆದ ಡಿಸೆಂಬರ್ 25ರ ಕ್ರಿಸ್ ಮಸ್ ಹಬ್ಬದ ದಿನವೇ ಈ ಕುರಿತು ಮಹತ್ವದ ಘೋಷಣೆ ಹೊರಡಿಸಿದ್ದಾರೆ. ದೇಶದಲ್ಲಿ ಜನವರಿ 10ರಿಂದ ವೈದ್ಯಕೀಯ ಸಿಬ್ಬಂದಿ, ಮೊದಲ ಶ್ರೇಣಿ ಕಾರ್ಮಿಕರಿಗೆ ಮುನ್ನೆಚ್ಚರಿಕೆ ಡೋಸ್ ಅನ್ನು ನೀಡಲು ಸರ್ಕಾರ ಅನುಮತಿ ನೀಡಲಾಗುವುದು. ಇದರ ಜೊತೆ ತೀವ್ರ ಅಸ್ವಸ್ಥತೆಯನ್ನು ಎದುರಿಸುತ್ತಿರುವ 60 ವರ್ಷ ಮೇಲ್ಪಟ್ಟ ವಯೋಮಾನದವರು ವೈದ್ಯರ ಶಿಫಾರಸ್ಸಿನ ಮೇಲೆ ಮುನ್ನೆಚ್ಚರಿಕೆ ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಬೂಸ್ಟರ್ ಡೋಸ್‌ಗಿಂತ ಮುನ್ನೆಚ್ಚರಿಕೆ: ಡೋಸ್ ಹೇಗೆ ಭಿನ್ನ? ಕೊರೊನಾವೈರಸ್ ಎರಡು ಡೋಸ್ ಲಸಿಕೆ ಪಡೆದುಕೊಂಡವರಿಗೆ ಈಗ ಮೂರನೇ ಡೋಸ್ ನೀಡುವತ್ತ ಸರ್ಕಾರ ಚಿತ್ತ ಹರಿಸಿದೆ. ಇಡೀ ಜಗತ್ತು ಅದನ್ನು ಬೂಸ್ಟರ್ ಡೋಸ್ ಎಂದು ಕರೆದರೆ, ಭಾರತದಲ್ಲಿ ಅದೇ ಮೂರನೇ ಡೋಸ್ ಅನ್ನು ಮುನ್ನೆಚ್ಚರಿಕೆ ಡೋಸ್ ಎಂದು ಕರೆಯಲಾಗುತ್ತಿದೆ. ಹಾಗಿದ್ದರೆ ಬೂಸ್ಟರ್ ಡೋಸ್ ಮತ್ತು ಮುನ್ನೆಚ್ಚರಿಕೆ ಡೋಸ್ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಒಂದು ವಾದದ ಪ್ರಕಾರ, ಮೊದಲ ಮತ್ತು ಎರಡನೇ ಡೋಸ್ ಲಸಿಕೆಯಾಗಿ ಕೊವಿಶೀಲ್ಡ್ ಅನ್ನು ಪಡೆದುಕೊಂಡವರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಿದರೆ ಅದನ್ನು ಬೂಸ್ಟರ್ ಡೋಸ್ ಎಂದು ಕರೆಯಲಾಗುತ್ತಿದೆ. ಅಂದರೆ ಮೊದಲು ನೀಡಿದ ಲಸಿಕೆಗೆ ಭಿನ್ನವಾದ ಲಸಿಕೆಯನ್ನು ನೀಡುವುದು ಬೂಸ್ಟರ್ ಡೋಸ್ ಎಂದು ಕರೆಸಿಕೊಳ್ಳುತ್ತದೆ. ಅದೇ ರೀತಿ ಮೊದಲು ಎರಡು ಡೋಸ್ ನೀಡಿದ ಲಸಿಕೆಯನ್ನೇ ಮೂರನೇ ಡೋಸ್ ಆಗಿ ನೀಡಿದರೆ ಅದನ್ನು ಮುನ್ನೆಚ್ಚರಿಕೆ ಡೋಸ್ ಎಂದು ಕರೆಯಲಾಗುತ್ತದೆ. ಇನ್ನೊಂದು ಅರ್ಥದಲ್ಲಿ ವಿದೇಶಗಳಲ್ಲಿ ಮೂರನೇ ಬಾರಿ ನೀಡುವ ಎಲ್ಲ ರೀತಿ ಲಸಿಕೆಗಳಿಗೂ ಬೂಸ್ಟರ್ ಡೋಸ್ ಎಂತಲೇ ಕರೆಯಲಾಗುತ್ತದೆ.
ಕೊವಿಡ್-19 ಮೂರನೇ ಡೋಸ್ ಏಕೆ ಅನಿವಾರ್ಯ? :
ಸಾಮಾನ್ಯವಾಗಿ ಕೊರೊನಾವೈರಸ್ ಲಸಿಕೆಯ ಎರಡನೇ ಡೋಸ್ ಪಡೆದ 7 ರಿಂದ 8 ತಿಂಗಳುಗಳಲ್ಲಿ ಅದರ ಸಾಮರ್ಥ್ಯ ತಗ್ಗುತ್ತದೆ. ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದೇ ಮೂರನೇ ಡೋಸ್ ಪ್ರಮುಖ ಉದ್ದೇಶವಾಗಿರುತ್ತದೆ. ಕೆಲವು ವಿಜ್ಞಾನಿಗಳ ಪ್ರಕಾರ, ಹೊಸತಾಗಿ ಪಡೆದುಕೊಳ್ಳುವ ಮುನ್ನೆಚ್ಚರಿಕೆ ಲಸಿಕೆಯು ಕೊವಿಡ್-19 ಹೊಸ ರೂಪಾಂತರಗಳಿಂದ ರಕ್ಷಣೆ ನೀಡುತ್ತದೆ. ಆದರೆ ಇದೇ ಬೂಸ್ಟರ್ ಡೋಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಅಷ್ಟೊಂದು ಒಲವು ಹೊಂದಿಲ್ಲ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇನ್ನೂ ಲಸಿಕೆ ವಿತರಣೆ ಅಭಿಯಾನವು ಸಮರ್ಪಕವಾಗಿ ನಡೆಯುತ್ತಿಲ್ಲ. ಅನೇಕ ದೇಶಗಳಲ್ಲಿ ಶೇ.40ರಷ್ಟು ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿಲ್ಲ. ಎರಡು ಡೋಸ್ ಲಸಿಕೆ ವಿತರಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ವಾದವಾಗಿದೆ.