ಕೋವಿಡ್-19 ಲಸಿಕೆ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲದಂತೆ ಸಾಕಷ್ಟು ರಕ್ಷಣೆ ನೀಡದೇ ಇರಬಹುದು ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಶೇ.4 ರಷ್ಟಕ್ಕಿಂತಲೂ ಕಡಿಮೆ ಇದೆ. ಇದು ಇತ್ತೀಚೆಗೆ ಭಾರತ ಓಮಿಕ್ರಾನ್ ಕುರಿತು ನಡೆಸಿದ ಮೊದಲ ಎಪಿಡೆಮಿಯೋಲಾಜಿಕಲ್ ಅಧ್ಯಯನ ವರದಿಯ ಸಾರಂಶವಾಗಿದೆ.
ಸಂಶೋಧಕರು ಭಾರತದ ಮುಂಚೂಣಿ ಸರ್ಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ಈ ಅಧ್ಯಯನ ವರದಿಯನ್ನು ನಡೆಸಿದ್ದು, ರೆಸ್ಪಿರೇಟೊರಿ ಆಫ್ ಮೆಡಿಕಲ್ ಸೈನ್ಸ್ ಎಂಬ ಹೆಸರಿನಲ್ಲಿ ಪ್ರಕಟವಾಗಿದ್ದು, ಡಿಸೆಂಬರ್ ವೇಳೆಗೆ ದೆಹಲಿಯಲ್ಲಿ ಓಮಿಕ್ರಾನ್ ಸಮುದಾಯಕ್ಕೆ ಹರಡಿದೆ ಎಂಬ ಮಾಹಿತಿಯನ್ನೂ ಬಹಿರಂಗಪಡಿಸಿದೆ. ಅಷ್ಟೇ ಅಲ್ಲದೇ ವಿಮಾನ ನಿಲ್ದಾಣಗಳಲ್ಲಿನ ಸ್ಕ್ರೀನಿಂಗ್ ಹಾಗೂ ವಿದೇಶಗಳಿಂದ ವಿಮಾನಗಳನ್ನು ತಡೆಹಿಡಿದಿರುವುದರ ಪರಿಣಾಮ ಅತ್ಯಂತ ಕಡಿಮೆ ಎಂದೂ ಹೇಳಿದೆ.
ದೆಹಲಿಯಲ್ಲಿ ಯಕೃತ್ತು ಮತ್ತು ಪಿತ್ತರಸ ವಿಜ್ಞಾನ ಸಂಸ್ಥೆ ರಾಷ್ಟ್ರ ರಾಜಧಾನಿಯಲ್ಲಿ 5 ಜಿಲ್ಲೆಗಳಲ್ಲಿ 264 ಕೋವಿಡ್-19 ಸೋಂಕು ಮಾದರಿಗಳ ಜಿನೋಮ್ ಸೀಕ್ವೆನ್ಸಿಂಗ್ ನಡೆಸಿದ್ದು, ಈ ಪೈಕಿ 82 ಸೋಂಕುಗಳಲ್ಲಿ ಓಮಿಕ್ರಾನ್ ದೃಢಪಟ್ಟಿದ್ದರೆ ಉಳಿದವು ಡೆಲ್ಟಾ ರೂಪಾಂತರಿಗಳಾಗಿವೆ. ಮಾದರಿಗಳ ಸಂಗ್ರಹ ಸಂಖ್ಯೆ ಕಡಿಮೆ ಇದ್ದರೂ ಓಮಿಕ್ರಾನ್ ಚಾಲಿತ ಕೋವಿಡ್-19 ಪ್ರಕರಣಗಳ ಏರಿಕೆಗೆ ಸಂಬಂಧಿಸಿದ ಪ್ರಾತಿನಿಧಿಕ ವಿಶ್ಲೇಷಣೆ ಎಂದು ಈ ಅಧ್ಯಯನ ವರದಿಯನ್ನು ಗುರುತಿಸಲಾಗುತ್ತಿದೆ.
ಓಮಿಕ್ರಾನ್ ಸೋಂಕಿತರ ಪೈಕಿ 72 ಮಂದಿ ಪೂರ್ಣ ಪ್ರಮಾಣದ ಲಸಿಕೆ ಪಡೆದಿದ್ದರು. 72 ರಲ್ಲಿ ಮೂವರಿಗೆ ಮಾತ್ರ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಎದುರಾಯಿತು, ಈ ಮೂವರಿಗೂ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಆರೋಗ್ಯ ಸಮಸ್ಯೆಗಳು ಅದಾಗಲೇ ಇದ್ದವು, ಆದರೆ ಅವರಿಗೆ ಯಾರಿಗೂ ಐಸಿಯು ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಹಿಂದಿನ ಅಲೆಯಲ್ಲಿ ಶೇ.20-23 ರಷ್ಟು ಮಂದಿಗೆ ಭಾರತದಲ್ಲಿ ಆಸ್ಪತ್ರೆಗೆ ಸೇರುವ ಅಗತ್ಯವಿತ್ತು.