ನವದೆಹಲಿ: ದೇಶದಲ್ಲೇ ಭಾರತೀಯ ಜನತಾ ಪಾರ್ಟಿ ಅತ್ಯಂತ ಶ್ರೀಮಂತ ಪಕ್ಷವಾಗಿದೆ. ಶುಕ್ರವಾರ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ತನ್ನ ವರದಿ ಬಿಡುಗಡೆ ಮಾಡಿದ್ದು ಅದರ ಪ್ರಕಾರ, 2019-2020ರ ಆರ್ಥಿಕ ವರ್ಷದಲ್ಲಿ 7 ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿ 6,988.57 ಕೋಟಿ ಮತ್ತು 44 ಪ್ರಾದೇಶಿಕ ರಾಜಕೀಯ ಪಕ್ಷಗಳ ಒಟ್ಟು ಆಸ್ತಿ 2,129.38 ಕೋಟಿ ರೂಪಾಯಿ ಆಗಿದೆ.
ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿಯದ್ದೇ ಗರಿಷ್ಠ ಆಸ್ತಿ ಎನ್ನಲಾಗುತ್ತಿದೆ. 4,847.78 ಕೋಟಿ ಆಸ್ತಿಯೊಂದಿಗೆ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಇದನ್ನು ಶೇಕಡವಾರು ಲೆಕ್ಕ ಹಾಕಿದಾಗ ಒಟ್ಟು 69.37% ಆಗಲಿದೆ. ಇನ್ನು ಎಡಿಆರ್ ಪ್ರಕಾರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸಂಪತ್ತಿನಲ್ಲಿ ಎರಡನೆಯ ರಾಷ್ಟ್ರೀಯ ಪಕ್ಷವಾಗಿದೆ. ಇದು 698.33 ಕೋಟಿ (9.99%) ಆಸ್ತಿಯನ್ನು ಹೊಂದಿದೆ. ಮೂರನೇ ಸ್ಥಾನದಲ್ಲಿ ಕಾಂಗ್ರೆಸ್ (INC) ಪಕ್ಷವಿದ್ದು, 588.16 ಕೋಟಿ (8.42%) ಮೌಲ್ಯದ ಆಸ್ತಿಯನ್ನು ದಾಖಲಿಸಿಕೊಂಡಿದೆ. ಇದೇ ವೇಳೆ 44 ಪ್ರಾದೇಶಿಕ ರಾಜಕೀಯ ಪಕ್ಷಗಳ ಪೈಕಿ ಪ್ರಮುಖ 10 ರಾಜಕೀಯ ಪಕ್ಷಗಳು 2019-20ನೇ ಹಣಕಾಸು ವರ್ಷದಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಆಸ್ತಿಯಲ್ಲಿ 2,028.715 ಕೋಟಿ ಅಥವಾ 95.27% ಮೌಲ್ಯದ ಆಸ್ತಿಯನ್ನು ಘೋಷಿಸಿವೆ.
ಪ್ರಾದೇಶಿಕ ಪಕ್ಷಗಳಲ್ಲಿ ಯಾರು ಅತ್ಯಂತ ಶ್ರೀಮಂತರು?
ಸಮಾಜವಾದಿ ಪಕ್ಷ (ಎಸ್‌ಪಿ) ಗರಿಷ್ಠ ಆಸ್ತಿ ರೂ 563.47 ಕೋಟಿ (26.46%), ನಂತರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ರೂ 301.47 ಕೋಟಿ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಡಿಎಂಕೆ) 267.61 ಕೋಟಿ ರೂ. ಎಂದು ಎಡಿಆರ್ ಹೇಳಿದೆ. ಶುಕ್ರವಾರ ಬಿಡುಗಡೆಯಾದ ವರದಿಯಲ್ಲಿ ಏಳು ಪಕ್ಷಗಳ ಆಸ್ತಿಯಲ್ಲಿ ಗಮನಾರ್ಹ ಹೆಚ್ಚಳ ಆಗಿರುವುದು ಕಂಡುಬಂದಿದೆ. 2016-17 ರಲ್ಲಿ ₹3,260.81 ಕೋಟಿಯಿಂದ 2017-18 ರಲ್ಲಿ ₹3,456.65 ಕೋಟಿಗೆ. 2018-19ರಲ್ಲಿ ₹5,349.25 ಕೋಟಿ ಮತ್ತು 2019-2020ರಲ್ಲಿ ₹6,988.57 ಕೋಟಿ ಆಗಿದೆ. ಇನ್ನು ಏಳು ಪಕ್ಷಗಳು ಯಾವುದೆಂದು ನೋಡೋದಾದ್ರೆ ಬಿಜೆಪಿ, ಬಿಎಸ್‌ಪಿ, ಕಾಂಗ್ರೆಸ್, ಸಿಪಿಎಂ, ಎಐಟಿಸಿ, ಸಿಪಿಐ ಮತ್ತು ಎನ್‌ಸಿಪಿಗಳಾಗಿವೆ.
ರಾಷ್ಟ್ರೀಯ ಪಕ್ಷಗಳ ವಾರ್ಷಿಕವಾಗಿ ಹೆಚ್ಚಳ ಎಷ್ಟು?
2018-19ರಲ್ಲಿ ಬಿಜೆಪಿ ರೂ. 2,904.18 ಕೋಟಿ ಆಸ್ತಿ ಘೋಷಿಸಿದ್ದು, 2019-20ರಲ್ಲಿ ರೂ. 4,847.78 ಕೋಟಿಗೆ ತನ್ನ ಆಸ್ತಿಯಲ್ಲಿ 67% ಹೆಚ್ಚಳ ಕಂಡಿತ್ತು, ಇದೇ ಅವಧಿಯಲ್ಲಿ ಕಾಂಗ್ರೆಸ್ ತನ್ನ ಆಸ್ತಿ ರೂ. 928.84 ಕೋಟಿಯಿಂದ ರೂ.588.16ಕ್ಕೆ ಕುಸಿತ ಕಂಡಿತ್ತು. ಬಿಎಸ್‌ಪಿ ರೂ. 738 ಕೋಟಿಯಿಂದ 698.33 ಕೋಟಿಗೆ ಇಳಿಕೆಯಾಗಿತ್ತು. ADR ನ ವಿಶ್ಲೇಷಣೆ ಪ್ರಕಾರ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಎಫ್‌ಡಿಆರ್/ನಿಶ್ಚಿತ ಠೇವಣಿಗಳ ಅಡಿಯಲ್ಲಿ ಗರಿಷ್ಠ ಆಸ್ತಿಯನ್ನು ಘೋಷಿಸಿವೆ. ಇದು ರೂ. 5,970.59 ಕೋಟಿ (ಒಟ್ಟು ಆಸ್ತಿಯ 65.48%) ನಂತರ ರೂ. 1,363.87 ಕೋಟಿ (14.96%) ಸ್ಥಿರ ಆಸ್ತಿ ಮತ್ತು ರೂ. 7 ಕೋಟಿ (5 ಕೋಟಿ) 10.38%) ಇತರೆ ಆಸ್ತಿಗಳ ಅಡಿಯಲ್ಲಿ ಇದೆ ಎಂದು ವರದಿ ಹೇಳಿದೆ.