ಕಣ್ಣೂರು: ಇಂದು ಮದುವೆ ಎಂಬುದು ಆಡಂಬರ ಆಗಿದೆ. ತಮ್ಮ ಸಿರಿಸಂಪತ್ತ, ಘನತೆ ಹಾಗೂ ಪ್ರತಿಷ್ಠೆಯನ್ನು ಪ್ರದರ್ಶಿಸಲು ಮದುವೆಯನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುವ ಈ ಕಾಲದಲ್ಲಿ ಕೇರಳದ ಕಣ್ಣೂರು ಮೂಲದ ವ್ಯಕ್ತಿಯೊಬ್ಬ ತನ್ನ ಮಗಳ ಜತೆಗೆ ಇತರೆ ಐವರು ಹೆಣ್ಣು ಮಕ್ಕಳ ಮದುವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿ ನಿಂತಿದ್ದಾರೆ.
ಈ ಅಪರೂಪದ ಘಟನೆಗೆ ಕಣ್ಣೂರಿನ ಎಡಚೆರಿ ಸಾಕ್ಷಿಯಾಗಿದೆ. ಇಲ್ಲಿನ ಮುಸ್ಲಿಂ ಸಲೀಂ ತನ್ನ ಮಗಳು ರಮೀಸಾ ಮದುವೆ ಜತೆಗೆ ವಯನಾಡು, ಎಡಚೆರಿ, ಗುಡಲೂರ್, ಮಲಪ್ಪುರಂ ಮತ್ತು ಮೆಪ್ಪಯ್ಯುರ್ ಮೂಲದ ಬಡ ಕುಟುಂಬದ ಯುವತಿಯರಿಗೆ ಅವರವರ ಧರ್ಮಕ್ಕೆ ಅನುಗುಣವಾಗಿ ಶಾಸ್ತ್ರೋಕ್ತವಾಗಿ ಮದುವೆ ಮಾಡುವ ಮೂಲಕ ಧರ್ಮಕ್ಕಿಂತ ಮಾನವೀಯತೆಯೇ ದೊಡ್ಡದು ಎಂಬುದನ್ನು ಸಾರಿದ್ದಾರೆ. ಅಲ್ಲದೆ, ಎಲ್ಲ ಧರ್ಮಗಳನ್ನು ಗೌರವಿಸುವವನೇ ನಿಜವಾದ ಮಾನವ ಎಂಬ ಸಂದೇಶವನ್ನು ಸಾರಿದ್ದಾರೆ.
ಸಾಮೂಹಿಕ ಮದುವೆಯಲ್ಲಿ ಎರಡು ಮದುವೆ ಹಿಂದು ಸಂಪ್ರದಾಯದಂತೆ ನಡೆದರೆ, ಉಳಿದ ಮೂರು ಮದುವೆ ಇಸ್ಲಾಮಿಕ್ ಪದ್ಧತಿಯಂತೆ ಜರುಗಿದೆ. ಮುನವ್ವರ ಅಲಿ ಶಿಹಾಬ್ ತಂಗಳ ಎಂಬುವರು ವಿವಾಹವನ್ನು ನೆರವೇರಿಸಿದರು. ಸಲೀಂ ಮಗಳು ರಮೀಸಾ ಸೇರಿದಂತೆ ಎಲ್ಲರೂ ಒಂದೇ ರೀತಿಯ ಸೀರೆಯನ್ನು ಧರಿಸಿದ್ದರು. ಈ ಮೂಲಕ ನಾವೆಲ್ಲರೂ ಭಾರತೀಯರು ಎಂಬ ಸಂದೇಶದ ಜತೆಗೆ ನಾವೆಲ್ಲರೂ ಸಮಾನರು ಎಂದು ಸಾರಿದರು. ಇನ್ನು ಸಲೀಂ ಐದೂ ಹೆಣ್ಣುಮಕ್ಕಳಿಗೂ ತಲಾ 10 ಸವರನ್ ಚಿನ್ನವನ್ನು ಉಡುಗೊರೆಯಾಗಿ ನೀಡಿದರು.
ಸಲೀಂ ತನ್ನ ಮಗಳನ್ನು ವರದಕ್ಷಿಣೆ ಕೇಳದ ವ್ಯಕ್ತಿಯೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದ. ಅದರಂತೆ ವರದಕ್ಷಿಣೆ ಪಡೆಯದ ವರನು ಕೂಡ ತನ್ನ ಮಗಳಿಗೆ ದೊರಕಿದ. ಇನ್ನೊಂದೆಡೆ ಮಗಳ ಮದುವೆ ದಿನ ಆರ್ಥಿಕವಾಗಿ ಹಿಂದುಳಿದ ಐವರು ಹೆಣ್ಣುಮಕ್ಕಳಿಗೆ ಒಂದೇ ವೇದಿಕೆಯಲ್ಲಿ ಮದುವೆ ಮಾಡಬೇಕೆಂದು ಸಲೀಂ ಮೊದಲೇ ನಿರ್ಧಾರ ಮಾಡಿದ್ದ. ಸ್ವತಃ ಸಲೀಂ ಅನೇಕ ಕುಟುಂಬಗಳಿಗೆ ಭೇಟಿ ನೀಡಿ ಅರ್ಹ ಯುವತಿಯರನ್ನು ಪತ್ತೆಹಚ್ಚಿದ್ದರು. ಇದೀಗ ರಮೀಸಾಳ ಮದುವೆಗೆ ಇಟ್ಟಿದ್ದ ಹಣವನ್ನು ದುಂದುವೆಚ್ಚಕ್ಕೆ ಖರ್ಚು ಮಾಡುವ ಬದಲು ವಿನಮ್ರ ಉದ್ದೇಶಕ್ಕೆ ಬಳಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದು, ಮಾನವೀಯತೆಯ ಸಂದೇಶವನ್ನು ಸಾರಿದ್ದಾರೆ.
ಇಡೀ ಕೇರಳ ಸಲೀಂ ಮಾನವೀಯತೆಗೆ ತಲೆಬಾಗಿದೆ. ಅದ್ಧೂರಿ ಹಾಗೂ ಆಡಂಬರದ ಮದುವೆ ಮೂಲಕ ತಮ್ಮ ಪ್ರತಿಷ್ಠೆಯನ್ನು ಪ್ರದರ್ಶಿಸುವ ಮೂಲಕ ಅನಗತ್ಯ ದುಂದು ವೆಚ್ಚದಿಂದ ಕಷ್ಟದಲ್ಲಿದ್ದವರಿಗೆ ನೆರವಾದರೆ, ಹಣಕ್ಕೂ ಕೂಡ ಒಂದು ಮೌಲ್ಯ ಬರುತ್ತದೆ ಎಂಬುದಕ್ಕೆ ಸಲೀಂ ತಾಜಾ ಉದಾಹರಣೆ ಆಗಿದ್ದಾರೆ.