ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಡುವೆಯೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ಈಗಾಗಲೇ ಸೇನಾ ಪಡೆಗಳು ಭರ್ಜರಿ ತಾಲೀಮು ನಡೆಸುತ್ತಿವೆ.
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕಳೆದ ವರ್ಷ ಭಾರತೀಯ ವಾಯಪಡೆಗೆ ಸೇರ್ಪಡೆಗೊಂಡಿರುವ ಅತ್ಯಾಧುನಿಕ ಐದು ರಫೇಲ್ ಯುದ್ಧ ವಿಮಾನಗಳು ಸೇರಿದಂತೆ ಒಟ್ಟು 75 ಯುದ್ಧ ವಿಮಾನಗಳು ತಮ್ಮ ಶಕ್ತಿ ಪ್ರದರ್ಶಿಸಲಿವೆ.
ಈ ವರ್ಷದ ಗಣ ರಾಜ್ಯೋತ್ಸವ ಮೊದಲಿಗಿಂತ ಹೆಚ್ಚು ರೋಚಕವಾಗಿರಲಿದೆ. ಜನವರಿ 26 ರಂದು “ಆಜಾದಿ ಕಾ ಅಮೃತ್ ಮಹೋತ್ಸವ”ದ ಅಂಗವಾಗಿ 75 ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ. ಇದು ರಾಜ್‌ಪಥ್‌ನಲ್ಲಿ ನಡೆದ ಅತಿ ದೊಡ್ಡ ಫ್ಲೈ ಪಾಸ್ಟ್ ಆಗಲಿದೆ ಎಂದು ವಾಯುಪಡೆಯ ಪ್ರೊ ವಿಂಗ್ ಕಮಾಂಡರ್ ಇಂದ್ರನೀಲ್ ನಂದಿ ಅವರು ಸೋಮವಾರ ತಿಳಿಸಿದ್ದಾರೆ.
ಐದು ರಫೇಲ್ ಯುದ್ಧ ವಿಮಾನಗಳು ಸಾಹಸ ಪ್ರದರ್ಶಿಸುವುದರೊಂದಿಗೆ ತಮ್ಮ ಶಕ್ತಿಯನ್ನು ಪ್ರದರ್ಶಿಸಲಿವೆ. ಮೊದಲ ಬಾರಿಗೆ ನೌಕಾಪಡೆಯ MiG29K ಮತ್ತು P8I ಯುದ್ಧ ವಿಮಾನಗಳು ಸಹ ಭಾಗವಹಿಸುತ್ತಿವೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ವಿಂಗ್ ಕಮಾಂಡರ್ ಇಂದ್ರನಿಲ್ ನಂದಿ, “ಭಾರತೀಯ ವಾಯುಪಡೆ, ಸೇನೆ ಮತ್ತು ನೌಕಾಪಡೆಯ ವಿಮಾನಗಳು ಸೇರಿದಂತೆ 75 ಯುದ್ಧ ವಿಮಾನಗಳು ಆಗಸದಲ್ಲಿ ಹಾರಾಟ ನಡೆಸಲಿವೆ. ಈವರೆಗೆ ರಾಜ್‌ಪಥ್‌ನಲ್ಲಿ ನಡೆದ ಎಲ್ಲ ಪರೇಡ್ ಗಳಿಗಿಂತ ಈ ಬಾರಿ ಅತ್ಯಂತ ಭವ್ಯವಾದ ಫ್ಲೈ ಪಾಸ್ಟ್ ಸೇನೆ ಪ್ರದರ್ಶನ ಮಾಡಲಿದೆ. 17 ಜಾಗ್ವಾರ್ ವಿಮಾನಗಳು 75 ನೇ ವರ್ಷದ ಅಮೃತ ಮಹೋತ್ಸವದ ಆಕಾರವನ್ನು ಆಗಸದಲ್ಲಿ ರೂಪಿಸಲಿದೆ” ಎಂದರು.
2019, ಜುಲೈ 29 ರಂದು ಮೊದಲ ಹಂತದ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದು ತಲುಪಿದ್ದವು. ಮತ್ತೆ ನ.05(2019)ರಂದು ಎರಡನೇ ಹಂತದ ಮೂರು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.