ಪಾಟ್ನಾ: ಕೊಲೆ ಪ್ರಕರಣದ ಆರೋಪಿ, ತಲೆಮರೆಸಿಕೊಂಡಿರುವ ಬಿಹಾರ ಆಹಾರ ಮತ್ತು ಗ್ರಾಹಕ ರಕ್ಷಣಾ ಸಚಿವ ಲೇಶಿ ಸಿಂಗ್ ಅವರ ಸೋದರಳಿಯ ಆಶಿಶ್ ಕುಮಾರ್ ಸಿಂಗ್ ಅವರ ತಲೆಗೆ ಪೂರ್ಣಿಯಾ ಜಿಲ್ಲೆಯ ಪೊಲೀಸರು ಶುಕ್ರವಾರ 50,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಈ ಮಧ್ಯೆ, ಧಮ್ದಾಹಾದ ಜಿಲ್ಲಾ ಮಂಡಳಿ ಮಾಜಿ ಕೌನ್ಸಿಲರ್ ವಿಶ್ವಜೀತ್ ಸಿಂಗ್ ಅಲಿಯಾಸ್ ರಿಂಟು ಸಿಂಗ್ ಅವರ ಹತ್ಯೆ ಪ್ರಕರಣದ ಆರೋಪಿ ಆಶಿಶ್ ಅಲಿಯಾಸ್ ಅಥಿಯಾಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವೆ ಲೆಸಿ ಸಿಂಗ್ ಅವರು ಹೇಳಿದ್ದಾರೆ.
ನವೆಂಬರ್ 11, 2021 ರಿಂದ ತಲೆಮರೆಸಿಕೊಂಡಿರುವ ಆಶಿಶ್ ತಲೆಗೆ 50,000 ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ ಎಂದು ಪುರ್ಣಿಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಯಾ ಶಂಕರ್ ಅವರು ಹೇಳಿದ್ದಾರೆ.
"ಆಶಿಶ್ ಒಬ್ಬ ಕುಖ್ಯಾತ ಕ್ರಿಮಿನಲ್ ಆಗಿದ್ದು, ರಿಂಟು ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದಾರೆ," ಎಂದು ದಯಾ ಶಂಕರ್ ಅವರು ತಿಳಿಸಿದ್ದಾರೆ.
ನವೆಂಬರ್ 11, 2021 ರಂದು ಸರ್ಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಿಂಟು ಅವರನ್ನು ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ರಿಂಟು ಸಿಂಗ್ ಪತ್ನಿ, ಮಾಜಿ ಜಿಲ್ಲಾ ಮಂಡಳಿ ಸದಸ್ಯೆ ಅನುಲಿಕಾ ಸಿಂಗ್ ಅವರು ಆಶಿಶ್ ಮತ್ತು ಆತನ ಸಹಚರರು ತನ್ನ ಪತಿಯನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದರು.
ನಾವು ನಮ್ಮ ತಾಂತ್ರಿಕ ಕೋಶವನ್ನು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ್ದೇವೆ. ಅಲ್ಲದೆ, ಆರೋಪಿಯನ್ನು ಪತ್ತೆಹಚ್ಚಲು ಬಿಹಾರದ ವಿವಿಧ ಜಿಲ್ಲೆಗಳು ಮತ್ತು ನೆರೆಯ ಉತ್ತರ ಪ್ರದೇಶಕ್ಕೆ ಶೋಧ ತಂಡಗಳನ್ನು ಕಳುಹಿಸಲಾಗಿದೆ ಎಂದು ದಯಾ ಶಂಕರ್ ತಿಳಿಸಿದ್ದಾರೆ.